ಎಷ್ಟೋ ದಿನಗಳಾದವು.,ದಿನಗಳೇನು,ಬಹು ತಿಂಗಳಾದವೇನೋ ಪೆನ್ನು ಹಿಡಿಯದೇ..!!ಗೆಳತಿ ಕಾವ್ಯಾಳನ್ನು ನೆನೆಯದೇ,ಅನೇಕ ದಿನಗಳಾದವು!ಋಷಿಕಾಗೆ,ಅಜ್ಜಿಗೆ ಅಷ್ಟೇಕೆ ಪುಟ್ಟುಗೆ ಪತ್ರ ಬರೆಯದೇ ಬಹು ದಿನಗಳಾದವು.
ಈ ಮುಂಚೆ ಪತ್ರವೊಂದರಲ್ಲಿ ಪ್ರೇಮ ಪತ್ರ ,ಕಾವ್ಯ ಬರೆಯುವ ನಾನು ,ಪ್ರೀತಿಯ ಹುಟ್ಟೂರಿನ ಬಗ್ಗೆ ಒಮ್ಮೆಯೂ ಬ್ಲಾಗಿನಲ್ಲಿ ಬರೆದಿಲ್ಲವಲ್ಲ ಎಂದು ಕೇಳಿದ್ದೆ.ಇಂದು ಏಕೋ ಮನಸ್ಸು ನಮ್ಮೂರನ್ನು ಬಹು ನೆನೆಸಿತು.'ಜನನೀ ಜನ್ಮಭೂಮಿಶ್ಚ ,ಸ್ವರ್ಗಾದಪಿ ಗರಿಯಸಿ'ಎಂಬಂತೆ ಎಲ್ಲೇ ಇರಲಿ ನಮ್ಮ ಊರಿನಲ್ಲಿ ಸಿಗೋ ಖುಷಿ ಮತ್ತೆಲ್ಲೂ ಸಿಗಲ್ಲ.
ನಮ್ಮೂರು 'ಶಿರಸಿ'.ಕರಾವಳಿ,ಮಲೆನಾಡು,ಬಯಲುಗಳಿಂದ ಕೂಡಿದ ಉತ್ತರಕನ್ನಡ ಜಿಲ್ಲೆಯ ಅತಿ ದೊಡ್ಡ ಊರೆನ್ನಬಹುದು.ಜಿಲ್ಲೆಯ 11 ತಾಲೂಕುಗಳಲ್ಲಿ ಶಿರಸಿಯೂ ಒಂದು.ಶಿರಸಿ ಎಂದರೆ ನೆನಪಾಗುವುದೇ ಶ್ರೀ ಮಾರಿಕಾಂಬಾ ದೇವಿ.
ಶಿರಸಿಯ ಗ್ರಾಮ ದೇವತೆ.ಶಿರಸಿಯ ಶ್ರೀಮಾರಿಕಾಂಬಾ ಜಾತ್ರೆ ಕರ್ನಾಟಕದಲ್ಲೇ ಎರಡನೆ ಅತಿ ದೊಡ್ಡ ಜಾತ್ರೆ.(ಸಾಗರದ ಮಾರಿಕಾಂಬಾ ಜಾತ್ರೆ ಮೊದಲನೆಯದು ).ಮಾರ್ಚ್-ಎಪ್ರಿಲ್ ತಿಂಗಳಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಗೆ ಲಕ್ಷಾಂತರ ಮಂದಿ ದೂರದೂರದ ಊರಿಂದ ಬಂದು ತಾಯಿಯ ಆಶೀರ್ವಾದ ಪಡೆಯುತ್ತಾರೆ.
ಜನರ ಮುಖ್ಯ ಉದ್ಯೋಗ ವ್ಯವಸಾಯವೆನ್ನಬಹುದು.ಅಕ್ಕಿ ಮುಖ್ಯ ಬೆಳೆ.ಅಡಿಕೆ,ತೆಂಗು,ಬಾಳೆ,ಅಲ್ಲದೆ ಯಾಲಕ್ಕಿ,ಕಾಳು ಮೆಣಸು ಇತ್ಯಾದಿ ಸಾಂಬಾರು ಪದಾರ್ಥಗಳಿಗೂ ಹೆಸರುವಾಸಿ ನಮ್ಮೂರು.
ವಿದ್ಯಾಭ್ಯಾಸಕ್ಕಾಗಿ ಆವೆಮರಿಯಾ,ಮಾರಿಕಾಂಬಾ,ಎಂ.ಈ.ಎಸ್ ಮುಂತಾದ ಪ್ರಮುಖ ಶಾಲಾ-ಕಾಲೇಜುಗಳು ,ಅಲ್ಲದೆ ಕೃಷಿ ,ತೋಟಗಾರಿಕೆ ವಿಭಾಗಳಲ್ಲಿ ಉನ್ನತ ವ್ಯಾಸಂಗಕಾಗಿ ಕಾಲೇಜುಗಳು,ತಂತ್ರಜ್ಞಾನ,ವೈದ್ಯಕೀಯ ಇತ್ಯಾದಿ ವಿಷಯಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಧಾರವಾಡ,ಹುಬ್ಬಳ್ಳಿ ನಗರಗಳು ಬಹು ಹತ್ತಿರದಲ್ಲಿವೆ.
ಬೇಡರ ವೇಷ, ಯಕ್ಷಗಾನ,ಭರತನಾಟ್ಯ ಮುಂತಾದ ಕಲೆಗಳಲ್ಲೂ ನಮ್ಮೂರವರು ಬಹು ಹೆಸರುವಾಸಿ.ಭಾಗವತರ ನಿರ್ದೇಶನ,ಚಂಡೆ,ಮದ್ದಳೆ ಯೊಂದಿಗೆ ಹಿಮ್ಮೇಳದಲ್ಲಿ ,ಮುಮ್ಮೇಳದಲ್ಲಿ ಪಾತ್ರಧಾರಿಗಳೊಂದಿಗೆ ಸಾಮಾನ್ಯವಾಗಿ ರಾತ್ರಿ ಸಾಗುವ ಈ ಯಕ್ಷಗಾನ ಆಟಗಳಿಗೆ ಬಹು ವರ್ಷಗಳ ಹಿನ್ನೆಲೆಯಿದೆ.
ಅನೇಕ ದೇವಸ್ಥಾನ,ಚರ್ಚು,ಮಸೀದಿಗಳಿರುವ ಊರಲ್ಲಿ ಎಲ್ಲ ಶಿರಸಿವಾಸಿಗಳು 'ನಾವೆಲ್ಲರೂ ಒಂದೇ' ಎಂಬಂತೆ ಎಲ್ಲಾ
ಹಬ್ಬವನ್ನೂ 'ನಮ್ಮ ಹಬ್ಬ'ವೆಂಬಂತೆ ಬೇಧಭಾವವಿಲ್ಲದೇ ಆಚರಿಸುತ್ತಾರೆ.
'ಮುಸುಕಿನ ಬಾವಿ' ಶಿರಸಿಯ ಇನ್ನೊಂದು ಆಕರ್ಷಣೆ.ಹಿಂದೆ ಸೋಂದಾ ರಾಣಿ ಸುರಂಗ ಮಾರ್ಗದಿಂದ ಸ್ನಾನ ಮಾಡಲು ಬರುತ್ತಿದ್ದ ಕೊಳವದು.ಬಹು ವರ್ಷಗಳಿಂದ ಪಾಲು ಬಿದ್ದು ಯಾರಿಗೂ ತಿಳಿಯದಿದ್ದ ಪ್ರದೇಶವನ್ನು ಈಗ ಪುನರ್ ನಿರ್ಮಾಣ ಮಾಡಿ ,ಮಕ್ಕಳಿಗೆ ಆಟವಾಡಲು ಪುಟ್ಟ ಬಯಲನ್ನು ಮಾಡಿರಲು,ಸಂಜೆಯ ಸಮಯದಲ್ಲಿ 'ಮುಸುಕಿನ ಬಾವಿ'ಯ ಬಳಿ ಹೋದರೆ ದಣಿದ ಮನ ಉಲ್ಲಸಿತಗೊಂಡಿತು.
"ಮರುಜನ್ಮವೆಂಬುದಿರೆ ಮನುಷ್ಯನಾಗಿಯಲ್ಲದಿದ್ದರೂ,ಮರಿದುಂಬಿಯಾಗಿ ಈ ಮಣ್ಣಿನಲ್ಲಿ ಹುಟ್ಟಬೇಕು" ಎಂದು ಕವಿ ಪಂಪ ಬರೆದದ್ದು ಹಿಂದೆ ಕದಂಬರ ರಾಜಧಾನಿಯಾಗಿದ್ದ ಬನವಾಸಿಯ ಕುರಿತು. ಬನವಾಸಿ ಶಿರಸಿಯಿಂದ ಕೇವಲ 23 ಕಿ.ಮೀ ದೂರದಲ್ಲಿದೆ.ಸಹಸ್ರಲಿಂಗ,ಯಾಣ,ಸೋಂದ,ಮಂಜುಗುಣಿ,ಇತ್ಯಾದಿ ಯಾತ್ರಾಸ್ಥಳಗಳೂ,ಮಾಗೋಡ,ಶಿವಗಂಗಾ,ಉಂಚಳ್ಳಿ,ಜೋಗ ,ಸಾತೊಡ್ಡಿಯಂಥ ಜಲಪಾತಗಳೂ ಶಿರಸಿಯಿಂದ ಬಹು ಹತ್ತಿರದಲ್ಲಿವೆ.
ಬಹು ಚಳಿಯೂ ಅಲ್ಲದ,ಬಹು ಬಿಸಿಲ ಬೇಗೆಯೂ ಅಲ್ಲದ ಬೆಚ್ಚನೆಯ ವಾತಾವರಣ ಯಾರನ್ನಾದರೂ ಶಿರಸಿಯತ್ತ ಧಾವಿಸುವಂತೆ ಮಾಡುತ್ತದೆ.ನೀವೂ ಶಿರಸಿಗೆ ಬೇಗ ಬಂದು ಶಿರಸಿಯ ವಿಹಂಗಮ ನೋಟ ವನ್ನು ನೋಡಿ ಸವಿಯಿರಿ.ಸುಸ್ವಾಗತವು ನಿಮಗೆ.