Monday, November 19, 2018


ಸೈಕಲ್‌ ಕತೆ


ಅಪ್ಪಾ , ನಾನು ದೊಡ್ಡವನಾದ ಮೇಲೆ, ಸೈಕಲ್‌ ರಿಪೇರಿ ಅಂಗಡಿ ಇಡ್ತೀನಿ' ಈ ವಾಣಿಜ್ಯವಾರ್ತೆಯನ್ನು ಈ ಸದ್ಯ ನೀವು ದೂರದರ್ಶನದಲ್ಲಿ ನೋಡಿರುತ್ತೀರಿ. ಎಲ್ಲರೂ ಇಂಜಿನಿಯರಿಂಗ್‌, ಡಾಕ್ಟರ್‌ ಓದುತ್ತೀನಿ ಅನ್ನುವ ಕಾಲದಲ್ಲಿ  ಮಗನ್ಯಾಕೆ ಅಪ್ಪನಿಗೆ ಹಾಗೇ ಹೇಳುತ್ತಾನೆ ಎಂದು ನೀವು ಯೋಚಿಸಬಹುದು. ಏಕೆಂದು ನಾನೂ ಯೋಚಿಸುತ್ತಿದ್ದೇನೆ.
ನನ್ನ ಮೊದಲ ಹುಟ್ಟುಹಬ್ಬಕ್ಕೆ ಕೇಸರಿ ಬಣ್ಣದ ಮೂರು ಚಕ್ರದ ಸೈಕಲ್‌ ಒಂದನ್ನು ನನ್ನ ಮಾಮ ಉಡುಗೊರೆಯಾಗಿ ನೀಡಿದ್ದನು. ಅದನ್ನು ನಾನು, ನನ್ನ ತಮ್ಮ ಕಿತ್ತಾಡಿಕೊಂಡು ಓಡಿಸುತ್ತಿದ್ದೆವು. ಇನ್ನು 5-6ನೇ ತರಗತಿಗೆ ಹೋಗುತ್ತಲೇ, ಬೇಸಿಗೆ ರಜೆಯಲ್ಲಿ ನನಗೆ ಸೈಕಲ್‌ ಕಲಿಸಲೆಂದು ನನ್ನ ಅಪ್ಪ ಬಾಡಿಗೆ ಸೈಕಲ್‌ ತಂದಿದ್ದರು. ಅವರ ಬಿಡುವಿನ ವೇಳೆಯಲ್ಲಿ ನನಗೆ ಮನೆಯ ಪಕ್ಕದ ಆಟದ ಮೈದಾನದಲ್ಲಿ ಕಲಿಸುತ್ತಿದ್ದರು. ಆದರೆ, ನನ್ನ ತಮ್ಮ ಸೈಕಲ್‌ ಓಡಿಸಲು ಕಲಿತನು. ಆಮೇಲೆ ನನ್ನ ತಮ್ಮನೇ ನನ್ನ ಗುರು!


ಸೈಕಲ್‌ ಕಲಿತ ಮೇಲೆ ಶಾಲೆಗೆ ಹೋಗಲು ನನಗೆ ಸಂಬಂಧಿಕರ ಸೈಕಲ್‌ ದೊರೆಯಿತು, ತಮ್ಮನಿಗೆ ಚಿಕ್ಕಪ್ಪ ಬೈಕು ಕೊಂಡರೆಂದು ಉಪಯೋಗಿಸದೇ ಇಟ್ಟ ಹೊಸ ಸೈಕಲ್‌ ಸೈಕಲ್‌ನಲ್ಲಿ ಹೋಗುತ್ತಿದ್ದೇವೆಂಬ ಮಹಾ ಅಭಿಮಾನ ನಮಗೆ. ಅವನ ಸೈಕಲನ್ನು ತೊಳೆದು, ನನ್ನ ಸೈಕಲನ್ನು ತೊಳೆಯಲು ಸಹಾಯ ಮಾಡುತ್ತಿದ್ದನು ನನ್ನ ತಮ್ಮ. ಇಷ್ಟರಲ್ಲಿ ಒಂದು ದಿನ ಶಾಲೆಯಲ್ಲಿ ನನ್ನ ತಮ್ಮನ ಸೈಕಲ್‌ ಕಳೆದು ಹೋಯಿತು, ಎರಡು ದಿನ ಅದರದೇ ಕನಸು. ನಂತರದ ದಿನಗಳಲ್ಲಿ ಇಬ್ಬರೂ ಸೇರಿ ಡಬ್ಬಲ್‌ ರೈಡ್‌ ಶುರು ಹಚ್ಚಿಕೊಂಡೆವು.5ನೇ ವರ್ಷದ ಹುಟ್ಟುಹಬ್ಬದ ದಿನ ನನ್ನ ಮಾಮ ಅವನ ಸೈಕಲ್ಲಿನ ಎದುರುಗಡೆ ಕೂರಿಸಿಕೊಂಡು ದೇವಸ್ಥಾನಕ್ಕೆ ಹೋದದ್ದು ಇನ್ನೂ ನೆನಪಿದೆ. ವಾಪಸ್‌ ಬರುವುದನ್ನು ಕಂಡ ಅವನ ಮಗಳು ಅವಳ ಹಕ್ಕಿನ ಸೀಟಿನಲ್ಲಿ ನಾನು ಕುಳಿತೆನೆಂದು ಹಠ ಮಾಡಿ ಮಾಮನ ಜೊತೆ ದೇವಸ್ಥಾನಕ್ಕೆ ಹೋಗಿ ಬಂದಿದ್ದಳು.
ನಮ್ಮ ಪಕ್ಕದ ಮನೆಯ ಅಂಕಲ್‌ ಒಳ್ಳೆಯ ಉದ್ಯೋಗದಲ್ಲಿದ್ದವರು, ರಿಟೈರ್‌ ಆಗುವವರೆಗೂ ಸೈಕಲ್ಲಿನಲ್ಲೇ ಕಚೇರಿಗೆ ಹೋಗುತ್ತಿದ್ದರು. ಅದೇ ಇರಬೇಕು ಅವರ ಆರೋಗ್ಯದ ಸೀಕ್ರೆಟ್‌. ಈಗ 70 ವಯಸ್ಸಾದರೂ ಗಟ್ಟಿಮುಟ್ಟಾಗಿದ್ದಾರೆ.
ಇತ್ತೀಚೆಗೆ ಸಾಫ್ಟ್ವೇರ್‌ ಕಚೇರಿಗಳಲ್ಲೂ ಸೈಕಲಿನದೇ ಹವಾ. ಬೈಕು, ಕಾರಿನಲ್ಲಿ ಮೂರು ತಾಸು ಮುಂಚೆ ಹೊರಟು ಟ್ರಾಫಿಕ್‌ನಲ್ಲಿ ಸಿಲುಕುವ ಬದಲು, ಸೈಕಲ್‌ನಲ್ಲಿ ಒಂದು ತಾಸಿನಲ್ಲಿ ತಲುಪಬಹುದೆಂದು ನನ್ನ ಸಹೋದ್ಯೋಗಿಯ ಅನಿಸಿಕೆ. ಮತ್ತೂಬ್ಬ ಬೆಳಿಗ್ಗೆ ಬೇಗ ಬಂದು ಜಿಮ್ಮಿಗೆ ಹೋಗುತ್ತಿದ್ದವನು, ಈ ಒಂದು ತಿಂಗಳಿಂದ ಸೈಕಲಿನ ಮೊರೆ  ಹೋಗಿದ್ದಾನೆ. ವಿಶ್ವೇಶ್ವರಯ್ಯ ಸಂಗ್ರಹಾಲಯದಲ್ಲಿ ಸೈಕಲನ್ನು ತುಳಿದು ಬಾಲನ್ನು ರಿಂಗ್‌ನಲ್ಲಿ ಹಾಕುವ ಆಟವನ್ನು ಆಡಿದ ನೆನಪು. ಸೈಕಲ್‌ ಓಡಿಸುವ ಸ್ಪರ್ಧೆ, ಸ್ಲೋ ಸೈಕ್ಲಿಂಗ್‌ ಮುಂತಾದ ಸ್ಪರ್ಧೆಗಳು ಕ್ರೀಡಾ ಜಗತ್ತಿನಲ್ಲಿ ಶುರುವಾಗಿವೆ. ಸೈಕಲ್‌ ಮೇಲೆ ವಿವಿಧ ಸಾಹಸಗಳನ್ನು ಸರ್ಕಸ್ಸಿನಲ್ಲಿ ಕಾಣಬಹುದು.

ಕೆಲವು ಪ್ರದೇಶಗಳಲ್ಲಿ ಬೇರೆ ವಾಹನ ಸೌಲಭ್ಯ ಒಲ್ಲದಿರುವ ಕಡೆಗಳಲ್ಲಿ  ಸೈಕಲ್‌ ಒಂದೇ ದಾರಿ. ಜೈಪುರದಲ್ಲಿ ಸೈಕಲ್‌ಗಾಡಿಯಲ್ಲಿ  ನಮ್ಮ ನಾಲ್ಕು ಜನರನ್ನು ತಿರುಗಾಡಿಸಿದ್ದು -ಅವನು ಸೈಕಲ್‌ ಮ್ಯಾನ್‌ ಇರಬೇಕು.

cycle rikshaw ಗೆ ಚಿತ್ರದ ಫಲಿತಾಂಶ
ಪೆಟ್ರೋಲ್‌ ಡಿಸೇಲ್‌ ಈ ಜಗದಲ್ಲಿ ಕಡಿಮೆಯಾಗಿ, ಬೆಲೆ ಜಾಸ್ತಿಯಾಗಿರುವ ಕಾಲದಲ್ಲಿ ಹಿತಮಿತವಾಗಿ ಕಾರು, ಬೈಕು ಓಡಿಸಿ, ಸೈಕಲ್‌ ಬಳಸಿದರೆ ನಮ್ಮ ಮುಂದಿನ ಪೀಳಿಗೆಯು ನಮ್ಮಂತೆ ಏನಾದರೂ ಸಾಧಿಸಬಹುದು, ಇಲ್ಲವಾದರೆ ಪೆಟ್ರೋಲ್‌ ಪಂಪಿನ ಜಾಗದಲ್ಲಿ ನಮ್ಮ ಮಕ್ಕಳು ಸೈಕಲ್‌ ಅಂಗಡಿ ತೆಗೆಯಬೇಕಾಗಬಹುದು !

(ಉದಯವಾಣಿಯ ಯುವ ಸಂಪದದಲ್ಲಿ ಆಗಸ್ಟ್ ೨೫ರಂದು ಪ್ರಕಟಿತ )

https://www.udayavani.com/kannada/news/youth-supplement/232270/cycle-story

No comments: