Monday, September 23, 2019






                  ಈ ದಿನ ಶಾಲೆಗೆ ರಜೆ…
                              ಮಕ್ಕಳಿಗೆ ಮೋಜು, ಅಮ್ಮನಿಗೆ ಗೋಳು
ಪ್ರಿಸ್ಕೂಲ್‌ ಓದುವ ಮಗರಾಯನಿಗೆ ಮೊಹರಂ, ಓಣಂ ಎಂದು ಶಾಲೆಗೆ ಎರಡು ದಿನ ರಜೆ. ಅಯ್ಯೋ, ಮೊದಲೇ ಗೊತ್ತಿದ್ದರೆ ಗೌರಿ- ಗಣೇಶ ಹಬ್ಬಕ್ಕೆಂದು ಊರಿಗೆ ಹೋದವಳು ಇನ್ನೂ ಎರಡು ದಿನ ಅಲ್ಲಿಯೇ ಉಳಿದುಕೊಳ್ಳಬಹುದಿತ್ತು ಅಂತ ಕೈ ಕೈ ಹಿಸುಕಿಕೊಂಡೆ. ದಿನಾಲೂ ತಕರಾರಿಲ್ಲದೆ ಶಾಲೆಗೆ ಹೋಗುವ ಮಗ, ಮಧ್ಯಾಹ್ನ ಮನೆಗೆ ಬಂದ ಕೂಡಲೇ ಮಲಗುವ ಅಭ್ಯಾಸ ಮಾಡಿಕೊಂಡಿದ್ದಾನೆ. ನಿದ್ದೆ ಮುಗಿಸಿ ಎದ್ದರೆ ಅವನು ಹಿಡಿಯಲಾಗದ ಪಾದರಸ! ಒಂದು ಕ್ಷಣವೂ ಕೂರಲು ಬಿಡದಂತೆ, “ಅಮ್ಮಾ, ಹೊರಗೆ ಹೋಗುವಾ, ಅಮ್ಮಾ, ಆ ಆಟ ಆಡುವಾ, ಇದು ಮಾಡುವ ಬಾ…ಅಂತ ಪೀಡಿಸಿ, ಹೊರಗೆ ಎಳೆದೊಯ್ಯುತ್ತಾನೆ. ವಾಪಸ್‌ ಬಂದಮೇಲೆ ಕೈಕಾಲು ತೊಳೆದು, ದೇವರಿಗೆ ಪ್ರಾರ್ಥನೆ ಮಾಡಿ, ಹೋಮ್‌ವರ್ಕ್‌ ಮಾಡಲು ಕೂರುತ್ತಾನೆ. ಹೋಮ್‌ವರ್ಕ್‌ ಏನಾದ್ರೂ ಬೇಗ ಮುಗಿಯಿತೆಂದರೆ ನನ್ನ ಕಥೆ ಮುಗಿಯಿತು ಅಂತ ಅರ್ಥ! ಕಥೆ ಪುಸ್ತಕಗಳನ್ನು ಹಿಡಿದು ಆ ಕಥೆ ಹೇಳಮ್ಮ, ಇದು ಹೇಳಮ್ಮ ಎಂದು ಕೆಲವೊಮ್ಮೆ ಹೇಳಿದ್ದೇ ಕಥೆಯನ್ನು ನಾಲ್ಕಾರು ಸಲ ಹೇಳಿಸುತ್ತಾನೆ.
ಅವನೊಂದಿಗೆ ಇದ್ದರೆ ನನಗೆ ಮನೆಕೆಲಸವೂ ಸಾಗದು, ಕೆಲಸ ಮಾಡಲು ಮನಸ್ಸೂ ಬಾರದು. ಇನ್ನು ರಜೆಯೆಂದರೆ ಕೇಳಬೇಕೆ? ಬೆಳಗ್ಗಿನಿಂದ ಸಂಜೆಯ ತನಕ, ಮನೆಯವರು ಕಛೇರಿಯಿಂದ ವಾಪಸ್‌ ಬರುವವರೆಗೂ ಅವನನ್ನು ಸುಧಾರಿಸುವಷ್ಟರಲ್ಲಿ ಸಾಕು ಬೇಕಾಗಿರುತ್ತದೆ. ಮಗನಿಗೆ ರಜೆ ಇರುವ ದಿನ ಬೆಳಗ್ಗೆ ಎಂದಿಗಿಂತ ಬೇಗ ಎದ್ದು ಅಡುಗೆ, ಮನೆಕೆಲಸವನ್ನೆಲ್ಲ ಮುಗಿಸಿಬಿಡುತ್ತೇನೆ. ಯಾಕಂದ್ರೆ, ಎದ್ದ ಮೇಲೆ ಅವನು ಯಾವುದನ್ನೂ ಮಾಡಲು ಬಿಡುವುದಿಲ್ಲವಲ್ಲ!
ಮನೆಯವರನ್ನು ಕಚೇರಿಗೆ ಕಳುಹಿಸಿದಮೇಲೆ ನಾವಿಬ್ಬರೂ ಮನೆಯೊಳಗೆ ಹೊಸದೊಂದು ಪ್ರಪಂಚ ಸೃಷ್ಟಿಸಿಕೊಳ್ಳುತ್ತೇವೆ. ಅವನಿಗೆ ಕಥೆ ಬೇಕಿದ್ದರೆ ಕಥೆ, ಬಣ್ಣ ಹಚ್ಚೋಣ ಅಂದರೆ ಬಣ್ಣ, ಆಟ ಅಂದರೆ ಆಟ… ಎಲ್ಲವಕ್ಕೂ ನಾನು ರೆಡಿಯಾಗಿರಬೇಕು. ಆಗಲ್ಲ ಅನ್ನುವ ಆಯ್ಕೆಯೇ ಇಲ್ಲ. ಬಣ್ಣದ ಕ್ರೆಯಾನ್ಸ್‌, ಪೆನ್ಸಿಲ್‌, ವಾಟರ್‌ ಕಲರ್‌ ಹೀಗೆ ಏನು ಸಿಗುತ್ತದೋ, ಅದನ್ನು ಹಿಡಿದು ನಾವಿಬ್ಬರೂ ತರಕಾರಿ, ಎಲೆ, ಹಣ್ಣುಗಳ ಚಿತ್ರಕ್ಕೆ ಬಣ್ಣ ಬಳಿಯಲು ಶುರು ಮಾಡುತ್ತೇವೆ. ಅವನ ಪ್ರಕಾರ ಎಲೆಗೆ ಹಸಿರು ಬಣ್ಣವೇ ಆಗಬೇಕಿಲ್ಲ, ಕಪ್ಪು, ಕೆಂಪು, ನೀಲಿ ಯಾವುದಾದರೂ ಸರಿಯೇ! ಸ್ವಲ್ಪ ಹೊತ್ತಲ್ಲಿ ಬಣ್ಣದಾಟ ಬೋರು ಬಂದು, ಮತ್ಯಾವುದೋ ಚಟುವಟಿಕೆಯತ್ತ ಹೊರಳುತ್ತಾನೆ.
ರಜೆಯಲ್ಲವೇ ಎಂದು ತಿನ್ನಲು, ಸ್ನಾನ ಮಾಡಲು ಉದಾಸೀನವೋ, ಅಮ್ಮನ ಸಹನೆ ಪರೀಕ್ಷಿಸೋಣ ಎಂದೋ ಗೊತ್ತಿಲ್ಲ; ಆವತ್ತು ಎಲ್ಲ ಕೆಲಸವೂ ಮಂದಗತಿಯಲ್ಲಿಯೇ ಸಾಗುವುದು. ಅಷ್ಟರಲ್ಲಿ ಹೊರಗೆ ಯಾರಾದರೂ ಆಡುವ ಶಬ್ದ ಕೇಳಿದರೆ ಸಾಕು, “ಹೊರಗೆ ಹೋಗೋಣವಮ್ಮಾ’ ಎಂದು ಒಂದೇ ಹಠ. ಸರಿಯೆಂದು ಹೊರಗೆ ಆಡಲು ಹೋದರೆ, ದೊಡ್ಡ ಮಕ್ಕಳೊಂದಿಗೆ ಅವರಂತೆಯೇ ಚೆಂಡು, ಕ್ರಿಕೆಟ್‌ ಆಡುವ ಆಸೆ ಇವನಿಗೆ. “ಚೆಂಡು ತಗಲುತ್ತದೆ. ನೀನು ಆಟಕ್ಕೆ ಬೇಡ’ ಅಂತ ಇವನೊಂದಿಗೆ ಆಡವಾಡಲು ಹಿಂದೆಮುಂದೆ ನೋಡುತ್ತಾರೆ. ಆಟವಾಡುವಾಗ ಬಿದ್ದು ಪೆಟ್ಟಾದಾಗ ನಾನು ನೋಡದಿದ್ದರೆ ತಾನಾಗಿಯೇ ಎದ್ದು ಮಣ್ಣು ಜಾಡಿಸಿಕೊಳ್ಳುವವನು, ನಾನು ನೋಡುತ್ತಿದ್ದರೆ ಅತ್ತೂ ಕರೆದು ರಂಪ ಮಾಡಿಬಿಡುತ್ತಾನೆ.
ಆಟದ ನಡುವಲ್ಲಿ ಸಮಯದ ಪರಿವೆಯಿಲ್ಲ. ಹಸಿವೆಯಂತೂ ಲೆಕ್ಕಕ್ಕೇ ಇಲ್ಲ. ರಜೆಯ ದಿನ ಮಧ್ಯಾಹ್ನದ ನಿದ್ದೆಗೂ ರಜಾ. ಬಿಸಿಲಲ್ಲಿ ಹೊರಗೆ ಆಡುವುದು ಬೇಡ ಅಂದರೆ, ಆ ಹಾಡು ಹಾಕಿ ಕೊಡು, ಈ ಕಾರ್ಟೂನ್‌ ತೋರಿಸು ಅಂತ ಟಿ.ವಿ. ಮುಂದೆ ಪ್ರತಿಷ್ಠಾಪನೆಗೊಳ್ಳುತ್ತಾನೆ. ಟಿ.ವಿ. ಬೋರಾದಾಗ, ಕ್ರಾಫ್ಟ್ನ ಹೆಸರಲ್ಲಿ ಮನೆ ತುಂಬಾ ರಾಶಿ ಕಸ ಮಾಡುತ್ತಾನೆ.
ಹೀಗೆ ಎರಡು ದಿನ ರಜೆ ಕಳೆಯುವಷ್ಟರಲ್ಲಿ ಅವನ ಹಿಂದೆ ಓಡಾಡಿ ನನಗೆ ಸುಸ್ತಾಗಿಬಿಟ್ಟಿತ್ತು. ಪ್ರಿಸ್ಕೂಲ್‌ ನಡೆಸುವ ಗೆಳತಿ, “ಏನೇ ಎರಡು ದಿನ ರಜೆಯೆಂದರೆ ಹಾಗೆ ಆಕಾಶ ಮೈಮೇಲೆ ಬಿದ್ದವಳಂತೆ ಆಡ್ತೀಯಲ್ಲೇ! ನಾವು ವಾರಪೂರ್ತಿ ನೋಡಿಕೊಳ್ತೀವಿ’ ಅಂತ ನಗುತ್ತಾಳೆ. ಅವಳು ಹೇಳುವುದೇನೋ ಸರಿ. ಆದರೆ, ಶಾಲೆಯಲ್ಲಿ ಟೀಚರ್‌ ಅಂತ ಗೌರವಿಸಿ, ಹಠ ಮಾಡದೆ ಸುಮ್ಮನಿರುವ ಕಂದಮ್ಮಗಳು ಅಮ್ಮನೊಡನೆ ಅಷ್ಟೇ ಶಿಸ್ತಿನಿಂದ ಎಲ್ಲಿರುತ್ತಾರೆ? ಮಕ್ಕಳ ರಜೆ, ಅಮ್ಮಂದಿರಿಗೆ ಸಜೆ ಅನ್ನಿಸುವುದು ಅದೇ ಕಾರಣಕ್ಕೆ!
-ಸಾವಿತ್ರಿ ಶ್ಯಾನಭಾಗ್‌
                            (ಉದಯವಾಣಿಯ 'ಅವಳು'ನಲ್ಲಿ ಪ್ರಕಟಿತ )







                       ಟೊಮ್ಯಾಟೊ ಕೀ ಬಾತ್‌


ನಿಮ್ಮ ಮನೆಯಲ್ಲಿ ಏನು ಅಡುಗೆ ಇವತ್ತು’ ಎಂದು ಪಕ್ಕದ ಮನೆಯ ಹೆಂಗಸು ನನ್ನನ್ನು ಕೇಳಿದ ದಿನಕ್ಕೂ ನಾ ಮಾಡುವ ಅಡುಗೆಗೂ ಏನೋ ಸಂಬಂಧವೆಂಬಂತೆ ಆ ದಿನ ನಾನು ಟೊಮ್ಯಾಟೊ ಸಾರು ಮಾಡಿರುತ್ತೇನೆ ಎಂದರೆ ನೀವು ನಂಬುತ್ತೀರೋ ಇಲ್ಲವೋ! ಟೊಮ್ಯಾಟೊ ಸಾರು ಮಾಡಿದ ದಿನ ಅವರ ಆರನೇ ಸೆನ್ಸ್‌ ಹೇಳುತ್ತೋ ನಾನರಿಯೇ! ಬೇಳೆ, ಬಟಾಟೆ, ಬಟಾಣಿಯೆಂದರೆ ನನ್ನ ಹೊಟ್ಟೆಗೆ ಏನೋ ದ್ವೇಷ, ತಿಂದು ಗ್ಯಾಸ್ಟ್ರಿಕ್‌ ಸಮಸ್ಯೆ ಬೇಡವೆಂದು ಇಂದು ಏನು ಅಡುಗೆ ಮಾಡಲಿ ಎಂಬ ಮಹಾನ್‌ ಪ್ರಶ್ನೆಗೆ ಉತ್ತರವೆಂಬಂತೆ ದಿಢೀರ್‌ ಎಂದು ಟೊಮ್ಯಾಟೊ ಸಾರು ಮಾಡುತ್ತೇನೆ. ಕೆಲವೊಮ್ಮೆ ದಿನ ಬಿಟ್ಟು ದಿನ ಟೊಮ್ಯಾಟೊ ಸಾರು ಮಾಡಿದ್ದು ಇದೆ. ಮನೆಯವರಂತೂ “ಹಿಂದಿನ ಜನ್ಮದಲ್ಲಿ ಟೊಮ್ಯಾಟೊ ಬೆಳೆಯುತ್ತಿದ್ದಿಯೇನೋ’ ಎಂದೂ ಕಾಡಿಸುತ್ತಾರೆ.
tomato smileys ಗೆ ಚಿತ್ರದ ಫಲಿತಾಂಶಟೊಮ್ಯಾಟೊ ಸಾರಿನಲ್ಲೇ ವಿವಿಧ ಪ್ರಯೋಗ ಮಾಡುವ ಪ್ರವೃತ್ತಿಯೂ ನನ್ನಲ್ಲಿದೆ. ಸ್ವಲ್ಪ ಬೇಳೆ ಹಾಕಿ ಟೊಮ್ಯಾಟೊ ಕೊಚ್ಚಿ ಹಾಕಿ, ರಸಂ ಪೌಡರ್‌ ಹಾಕಿ ಮಾಡುವುದು ಒಂದು ರೀತಿಯಾದರೆ, ಟೊಮ್ಯಾಟೊವನ್ನು ಬೇಯಿಸಿ ಮಿಕ್ಸಿಗೆ ಹಾಕಿ ಒಂದು ರೀತಿಯ ಸಾರು. ಅತ್ತೆ “ಸಾರಿನ ಪುಡಿಬೇಕೇನೆ?’ ಎಂದರೆ ಬೇಡ ಎನ್ನದೇ ಅದನ್ನು ತಂದು ಇವತ್ತು ಅತ್ತೆ ಮಾಡಿದ ಪುಡಿಯ ಸಾರು ಎಂಬ ಹೆಸರು. ಅಮ್ಮ ಕೊಟ್ಟಾಗ ಅಮ್ಮ ಮಾಡಿದ ಪುಡಿಯ ಸಾರು ಎಂದೂ, ತಮಿಳು ಶೈಲಿ, ಆಂಧ್ರ ಶೈಲಿ ಎಂದು ಗೂಗಲ್‌ ಬಾಬಾನಲ್ಲಿ ತಡಕಾಡಿ ಮಾಡಿದ ಸಾರು. ನಾಟಿ ಟೊಮ್ಯಾಟೊವನ್ನು ಕಿವುಚಿ ಬೆಳ್ಳುಳ್ಳಿ ಒಗ್ಗರಣೆ ಹಾಕಿದ ಸಾರು- ಹೀಗೆ ನಾನಾ ಬಗೆಯ ಸಾರನ್ನು ಮಾಡುವುದರಲ್ಲಿ ನಾನು ಪರಿ ಣಿ ತೆ.
ಇಂಜಿನಿಯರಿಂಗ್‌ ಓದಲು ಹಾಸ್ಟೆಲ್‌ ಸೇರಿದಾಗ ಅಮ್ಮನ ಅಡುಗೆಯನ್ನು ಬಹಳ ಮಿಸ್‌ ಮಾಡಿಕೊಳ್ಳುತ್ತಿದ್ದೆ. ಅವರು ಚೆನ್ನಾಗಿಯೇ ಅಡುಗೆ ಮಾಡಿದರೆ ನಮಗೆ ರೂಮ್‌ಮೇಟ್ಸ್‌ಗೆ ಸೇರದ ಕೆಲವು ಪದಾರ್ಥಗಳಿದ್ದವು. ಕೆಲವೊಮ್ಮೆ ಮ್ಯಾಗಿ ಅಥವಾ ದಾಲ್‌ ಕಿಚಡಿಯನ್ನು ಗೆಳತಿಯ ಇಲೆಕ್ಟ್ರಿಕ್‌ ಸ್ಟವ್‌ನಲ್ಲಿ ಮಾಡಿಕೊಳ್ಳುತ್ತಿದ್ದೆವು. ಮೆಸ್‌ನಲ್ಲಿ ಮಾಡಿದ ಪಲ್ಯ ಖಾಲಿಯಾದರೆ ದಿಢೀರನೇ ಟೊಮ್ಯಾಟೊ ಪಲ್ಯ ಮಾಡುತ್ತಿದ್ದರು.ಅದಕ್ಕಾಗೇ ನಾವು ಮೂವರು ಒಂದೇ ಕೋಣೆಯಲ್ಲಿರುವ ಗೆಳತಿಯರು ಊಟಕ್ಕೆ ಆದಷ್ಟು ತಡವಾಗೇ ಹೋಗುತ್ತಿದ್ದೆವು. ಪಲ್ಯ ಖಾಲಿಯಾಗಿದೆಯೇ ಎಂದು ಕಂಡು ಖಾಲಿಯಾದರೆ ನಮಗೆ ಸಂತೋಷವೋ ಸಂತೋಷ ಟೊಮ್ಯಾಟೊ ಪಲ್ಯ ತಿನ್ನಲು ಖಾಲಿಯಾಗದಿದ್ದರೆ ಹೇಗೋ ಅನ್ನ, ಸಾರನ್ನಷ್ಟೇ ತಿಂದು ತೃಪ್ತಿ ಪಟ್ಟುಕೊಳ್ಳುತ್ತಿದ್ದೆವೆನ್ನಿ. ಕಾಲೇಜಿನ ಕೊನೆಯ ಸೆಮಿಸ್ಟರ್‌ನಲ್ಲಿ ಮೆಸ್‌ ಬದಲಾಗಿ ಅಲ್ಲಿ ಒಂದೂ ದಿನವೂ ಪಲ್ಯವೂ ಖಾಲಿಯಾಗಿಲ್ಲ, ಟೊಮ್ಯಾಟೊ ಪಲ್ಯವೂ ಇಲ್ಲ. ತುಂಬಾ ಬೇಸರವಾಯಿತು.


ಕಚೇರಿ ಸೇರಿದಂತೆ ಕಾಲೇಜು ಗೆಳೆಯ/ತಿಯರೇ ನಮ್ಮದೇ ಕಚೇರಿ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರಿಂದ ಒಟ್ಟಿಗೆ ಊಟ ಮಾಡುತ್ತ, ನಮ್ಮ ಡಬ್ಬಿಯಲ್ಲಿಯ ತಿನಿಸುಗಳನ್ನು ಹಂಚಿಕೊಂಡು ತಿನ್ನುತ್ತಿದ್ದೆವು. ಹಾಗೇ ತರುತ್ತಿದ್ದರಲ್ಲಿ ಗೆಳೆಯನೊಬ್ಬ ಚಪಾತಿಯೊಂದಿಗೆ ಎಣ್ಣೆಗಾಯಿ, ಟೊಮ್ಯಾಟೊ ಪಲ್ಯ ತರುತ್ತಿದ್ದ. ಪಲ್ಯ ತಂದ ದಿನ ನನಗೆ ಹಬ್ಬವೋ ಹಬ್ಬ. ಮದುವೆಯಾಗಿ ಗರ್ಭಿಣಿಯಾದ ವಿಷಯ ತಿಳಿಸಿದ ಮಾರನೇ ದಿನ ಈ ಗೆಳತಿಗೆ ಒಂದು ಕೆ.ಜಿ. ಟೊಮ್ಯಾಟೊವನ್ನು ತಂದುಕೊಟ್ಟು ಅಮ್ಮನ ಬಳಿ ಹೇಳಿ ನನಗಾಗಿ ಪಲ್ಯ ಮಾಡಿಸಿ ತಂದಿದ್ದ.
ದೇವಸ್ಥಾನವೊಂದರಲ್ಲಿ ಊಟಮಾಡುವಾಗ ಚಟ್ನಿಯೆಂದು ಸ್ವಲ್ಪ ಬಡಿಸುವವರು ನನಗೆ ತುಸು ಜಾಸ್ತಿಯೇ ಬಡಿಸಿದರು. “ಸಂತೋಷಿ’ ಎಂದೇನೋ ಹೆಸರು ಹೇಳುತ್ತಿದ್ದರು. ಯಾವತ್ತು ಎರಡನೇ ಸಾರಿ ಬಡಿಸಲು ಬಾರದವರು ಆ ಪದಾರ್ಥವನ್ನಷ್ಟೇ ಎರಡನೇ ಬಾರಿ ತಂದರೆಂದರೆ ನನಗಿಷ್ಟವೆಂದು ದೇವರಿಗೂ ತಿಳಿಯಿತೇನೋ ಎಂದು ಆಶ್ಚರ್ಯವಾಯಿತು. ಖಾಲಿಯಾಗದೇ ಹಾಗೇ ಉಳಿದ ಆ ಪದಾರ್ಥ ಎರಡನೇ ಬಾರಿ ಬಂದಿತ್ತೆಂದು ಆಮೇಲೆ ತಿಳಿಯಿತು.
ಟೊಮ್ಯಾಟೊ ಪಲ್ಯ ಮಾಡಬೇಕೆಂದು ಜಾಲತಾಣದಲ್ಲಿ ತಡಕಾಡಿ ಎಷ್ಟೇ ಪ್ರಯತ್ನಪಟ್ಟರೂ ಗೆಳೆಯನ ಅಮ್ಮ ಮಾಡಿದಂತೆಯೋ, ಹಾಸ್ಟೆಲ್‌ ಮೆಸ್‌ನಲ್ಲಿ ಮಾಡಿದಂತೆ ರುಚಿ ಬರಲೇ ಇಲ್ಲ. ದೂರ ಸಂಬಂಧಿಯೊಬ್ಬರು ಊಟಕ್ಕೆ ಬಂದವರು ಮಾತನಾಡುತ್ತ ನನಗಿಷ್ಟವೆಂದು ಟೊಮ್ಯಾಟೊ ಪಲ್ಯದ ಸುದ್ದಿ ಬರುತ್ತಲೇ ಸಂತೋಷಿಯ ರೆಸಿಪಿ ಹೇಳಿದರು.ಅವರು ಹೊರಟು ಹೋಗುತ್ತಲೇ ಅಡುಗೆ ಮನೆಗೆ ಓಡಿ ಆ ರೆಸಿಪಿ ಪ್ರಯತ್ನಿಸಿದೆ. ಅದೇ ಮೆಸ್‌ನ ಪಲ್ಯ. ಬಹಳ ಸಂತೋಷವಾಯಿತು.ಚಪಾತಿ, ಅನ್ನ ಯಾವುದಕ್ಕೂ ನೆಂಜಿಕೊಂಡು ತಿನ್ನಲು ಸರಿ ಆ ಪಲ್ಯ.ಮಾವನವರು ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದರು. ಏನು ಅಡುಗೆ ಮಾಡಲೆಂದು ತಿಳಿಯದೇ ಬೇಳೆಸಾರು, ನನಗೆ ಸಂತೋಷ ತರುವ ಸಂತೋಷಿ (ಟೊಮ್ಯಾಟೊ ಪಲ್ಯ) ಮಾಡಿದೆ. ಚಪ್ಪರಿಸಿ ತಿಂದ ಮಾವನವರು ಮಾರನೇ ದಿನವೂ “ಅದನ್ನೇ ಮಾಡು’ ಎಂದಾಗ ನನ್ನ ಬೆನ್ನನ್ನು ನಾನೇ ತಟ್ಟುಕೊಂಡರೆ ಮನೆಯವರು “ಏನು ನಮ್ಮ ಅಪ್ಪನಿಗೂ ಕಲಿಸಿಕೊಟ್ಟಿಯಾ ಆ ನಿನ್ನ ಟೊಮ್ಯಾಟೊ ಪಲ್ಯದ ರುಚಿನಾ’ ಎಂದರು.
tomato smileys ಗೆ ಚಿತ್ರದ ಫಲಿತಾಂಶ
ನಾಳೆ ಡಬ್ಬಿ ಬೇಡ ಎಂದು ಮನೆಯವರು ಹೇಳಿದಾಗ ಮಾರನೇ ದಿನ ಬೆಳಿಗ್ಗೆ ಒಂದ್ಹ‌ತ್ತು ನಿಮಿಷ ತಡವಾಗಿ ಆರಾಮಾಗಿ ಏಳುವುದು ನನ್ನ ಅಭ್ಯಾಸ. ಆದರೆ ಮತ್ತೆ ಅವರ ಪ್ಲಾನ್‌ ಬದಲಾಗಿ ಟೀಮ್‌ ಲಂಚ್‌ ಕ್ಯಾನ್ಸಲ್‌ ಆಯಿತು. ಊಟಕ್ಕೆ ಆದರೆ ಹಾಕಿಕೊಡು ಎಂದರೆ ದಿಢೀರಾಗಿ ಏನು ಮಾಡುವುದು ಎಂಬ ಯೋಚನೆ. ಅನ್ನ ಮಾಡಿದರೆ, ಸಾರು ನೆಂಚಿಕೊಳ್ಳಲು ಪಲ್ಯ ಮಾಡುತ್ತ ಕೂರಬೇಕು.
ಅಷ್ಟೆಲ್ಲ ಮಾಡಲು ಸಾಕಷ್ಟು ಸಮಯವೇ ಬೇಕು. ಆಗ ನನಗೆ ಹೊಳೆದದ್ದು ಟೊಮ್ಯಾಟೊ ಬಾತ್‌. ಟೊಮ್ಯಾಟೊ, ಈರುಳ್ಳಿ, ಬೆಳ್ಳುಳ್ಳಿ, ಅಕ್ಕಿ ಹಾಕಿ ಚೆನ್ನಾಗಿ ಹುರಿದು ಮಾಡಿದರೆ ಮುಗಿಯಿತು.
ಸೂಪು ಮಾಡುತ್ತೇನೆಂದು ಮಾಡಿದ ಪ್ರಯೋಗ ಹತ್ತಾರು.ಗೆಳತಿಯೊಬ್ಬಳು ಟೊಮ್ಯಾಟೊ, ಈರುಳ್ಳಿ ಹಾಕಿ ಕುಕ್ಕರ್‌ನಲ್ಲಿ ಒಂದು ಸೀಟಿ ತೆಗೆದು ಮಿಕ್ಸಿಗೆ ಹಾಕಿ ಬೇಕಾದ ಪುಡಿ ಹಾಕು ಎಂದಳು. ಮನೆಯವರು “ಇದೇನು ಟೊಮ್ಯಾಟೊ ಸಾರು ಕುಡಿಯಲು ಕೊಟ್ಟಿದ್ದೀಯಾ’ ಎನ್ನಬೇಕೆ. ಟೊಮ್ಯಾಟೊ ಸೂಪಿಗಿಂತ ಅದಕ್ಕೆ ಹಾಕುವ ಕರಿದ ಬ್ರೆಡ್‌ ತಿನ್ನುವುದು ಇನ್ನಷ್ಟು ಇಷ್ಟ. ಹೊಟೇಲಿಗೆ ಹೋದರೆ “ಸೂಪು ಬೇಕಾ?’ ಎಂದು ಯಾರಾದರೂ ಕೇಳಿದರೆ, “ನನಗೆ ಟೊಮ್ಯಾಟೊ ಸೂಪು’ ಎಂದು ಹೇಳಿದರೆ ಉಳಿದವರು, “ಹೊಸ ಹೊಸದು ಯಾವುದಾದರೂ ಕುಡಿಯೇ ಅದೇನು ಟೊಮ್ಯಾಟೊ ಸೂಪು’ ಎಂದು ಅಣಕಾಡಿದರೂ ನಾನು ಕುಡಿಯುವುದು ಟೊಮ್ಯಾಟೊ ಸೂಪು.
ಪಲಾವ್‌, ಕುರ್ಮಾ, ಪನ್ನೀರ್‌, ಮಶ್ರೂಮ ಇತ್ಯಾದಿ ಪದಾರ್ಥಗಳನ್ನು ಮಾಡಲು ಟೊಮ್ಯಾಟೊ ಇರಲೇಬೇಕು.ಟೊಮ್ಯಾಟೊನಿಂದ ತಮಿಳು ಶೈಲಿಯಲ್ಲಿ ಚಟ್ನಿ, ಆಂಧ್ರ ಶೈಲಿಯಲ್ಲಿ ಶೇಂಗಾ, ಕೊತ್ತಂಬರಿ ಬೆರೆಸಿ ಮಾಡುವ ಚಟ್ನಿ ಹೀಗೆ ನಾನಾ ಬಗೆಯನ್ನು ಪ್ರಯತ್ನಿಸಿದ್ದೇನೆ. ಎಲ್ಲರ ಮನೆಯಲ್ಲಿ ಟೊಮ್ಯಾಟೊ ಕೆಜಿಗೆ ಮೂರು-ನಾಕು ರೂಪಾಯಿಗೆ ಇಳಿದಾಗ ನಾಲ್ಕಾರು ಕೆಜಿ ಬೇರೆಯ ದಿನ ಬೇಕೇ ಬೇಡವೇ ಎಂದು ತಂದರೆ ನಮ್ಮ ಮನೆಯಲ್ಲಿ ತರಕಾರಿ ತರಲು ಹೋದರೂ, ಹೋಗದಿದ್ದರೂ ವಾರಕ್ಕೆ ಒಂದೆರಡು ಕೆಜಿ ಟೊಮ್ಯಾಟೊ ಬೇಕೇ ಬೇಕು. ಕಡಿಮೆ ಬೆಲೆ ಇರುವಾಗ ಕೆಜಿಗಟ್ಟಲೆ ತಂದ ಟೊಮ್ಯಾಟೊದಿಂದ ಸಾಸು ತಯಾರಿಸಿಡುತ್ತಾರೆ ಎಂದು ಕೇಳಿ ನಾನು ಪ್ರಯತ್ನಿಸಿದೆ. ಏನು ತಪ್ಪಾಯಿತೋ ತಿಳಿಯಲಿಲ್ಲ, ರುಚಿ ಹದಗೆಟ್ಟು ತಿನ್ನಬೇಕೋ, ಬಿಸಾಡಬೇಕೋ ತಿಳಿಯದೇ ಬಂದ ನೆಂಟರಿಷ್ಟರಿಗೆಲ್ಲ ಹೊಸರುಚಿ ನೋಡಿಯೆಂದು ಹಂಚಿದೆ. ಅವರು ಒಂದೆರಡು ವರುಷವಾಯಿತು ನಮ್ಮ ಮನೆಯ ಬಳಿ ಕಾಲು ಹಾಕದೇ!
ಊರಿಗೆ ಹೋಗುವಾಗ ತಂಪು ಪೆಟ್ಟಿಗೆಯನ್ನು ಖಾಲಿ ಮಾಡಿ ಸ್ವಿತ್ಛ ಆಫ್ ಮಾಡಬೇಕೆಂದು ತರಕಾರಿಗಳನ್ನು ವಾರದ ಹಿಂದಿಂದ ತರುವುದನ್ನು ನಿಲ್ಲಿಸುತ್ತೇನೆ. ಆದರೆ ಪ್ರಯಾಣದ ಹೊತ್ತಲ್ಲಿ ತಿನ್ನಲು ಚಪಾತಿ, ಟೊಮ್ಯಾಟೊ ಸಂತೋಷಿ (ಪಲ್ಯ) ಮಾಡಿಟ್ಟುಕೊಳ್ಳುತ್ತೇನೆ. ಮಗರಾಯನಿಗೆ ಪ್ರಯಾಣವೆಂದರೆ “ಅಮ್ಮ ಚಪಾತಿ, ಪಲ್ಯ ಮಾಡಿಯಾಯಿತಾ’ ಎಂದು ಕೇಳುವಷ್ಟು ಅದು ಪ್ರಯಾಣದ ಭಾಗವೇ ಆಗಿಹೋಗಿದೆ.
ವಿದೇಶದಲ್ಲಿ ಕೆಲವು ಹಬ್ಬದ ಸಂದರ್ಭದಲ್ಲಿ ದ್ರಾಕ್ಷಿ, ಟೊಮ್ಯಾಟೊನಲ್ಲಿ ಆಟವಾಡುತ್ತ, ಒಬ್ಬರ ಮೇಲೆ ಇನ್ನೊಬ್ಬರು ಅದನ್ನು ಚೆಲ್ಲಾಡುತ್ತ ಆಡುತ್ತಾರಂತೆ. ಮನೆಯವರು ಒಮ್ಮೆ ಆ ಹಬ್ಬಕ್ಕೆ ನನ್ನನ್ನು ಕರೆದುಕೊಂಡು ಹೋಗುವುದಾಗಿ ಭರವಸೆ ನೀಡಿದ್ದಾರೆ. ನಮ್ಮ ದೇಶದಲ್ಲಿ ಇಷ್ಟವಾಗದ ಕಾರ್ಯಕ್ರಮದಲ್ಲಿ ಮಾತ್ರ ರಾಜಕಾರಣಿಗಳ ಮೇಲೆ ಟೊಮ್ಯಾಟೊವನ್ನು ಎಸೆಯುವುದು ಕೇಳಿದ್ದೇವೆ. ಆದರೆ ಅಲ್ಲಿ ಅದು ಒಂದು ಹಬ್ಬವೆಂದರೆ ನಮಗೆ ಆಶ್ಚರ್ಯವೇ ಸರಿ. ಅಯ್ಯೋ, ಅಷ್ಟನ್ನು ನಾವು ವ್ಯರ್ಥ ಮಾಡಿದೆವಲ್ಲ ಎಂದು ಕಾಡುತ್ತಿತ್ತೇನೋ! ನನಗಂತೂ ಅಷ್ಟು ಪಲ್ಯ ತಿನ್ನುವುದರಿಂದ ವಂಚಿತಳಾದೆಯಲ್ಲ ಎಂದು ಮನಸು ಕೊರಗುತ್ತಿತ್ತು. ಆದರೂ ಅವರ ಆಚರಣೆಯ ಹಿಂದೆ ಏನೋ ಅರ್ಥ ಅಡಗಿರಬೇಕಲ್ಲ. ಇಲ್ಲದಿದ್ದರೆ ಅವರ್ಯಾಕೆ ಸುಮ್ಮನೆ ಅದರಲ್ಲಿ ಆಡುತ್ತಾರೆ.
ಹುಂ! ನನಗೆ ತಿಳಿಯಿತು, ನೀವೆಲ್ಲ ಟೊಮ್ಯಾಟೊ ಬೆಲೆಯೆಷ್ಟು, ಏನು ಹೊಸರುಚಿ ಮಾಡಬಹುದು ಎಂದು ಗೂಗಲ್‌ ಬಾಬಾ, ಯೂಟ್ಯೂಬ್‌ ಬಾಬಾನ ಮೋರೆ ಹೋಗಿದ್ದೀರಾ?! ಸರಿ ನಾವೆಲ್ಲ ಹೊಸರುಚಿ ಮಾಡಿ ಹೊಸತು ಹೊಸತು ಅನುಭವಗಳೊಂದಿಗೆ ಜೀವನದಲ್ಲಿ ಹೊಸತನವನ್ನು ಕಾಣೋಣ. ಇಲ್ಲಿಗೆ ನನ್ನ ಟೊಮ್ಯಾಟೊ ಕೀ ಬಾತ್‌ ಮುಗಿಯಿತು.
ಸಾವಿತ್ರಿ ಶ್ಯಾನುಭಾಗ್‌

                                                (ಉದಯವಾಣಿಯ ಮಹಿಳಾ ಸಂಪದ ದಲ್ಲಿ ಪ್ರಕಟಿತ )

Friday, September 6, 2019






                                         ಧರ್ಮಸ್ಥಳ ಯಾತ್ರಾ ಪ್ರವಾಸ

ಶಾಲೆಯಲ್ಲಿ ಹೋಂವರ್ಕ ಯಾಕೆ ಮಾಡಿಲ್ಲ ಎಂದು ಮಗನನ್ನು ಕೇಳಿದಾಗ ಪುಟ್ಟ ತೊದಲು ನುಡಿಗಳಲ್ಲಿ ಧರ್ಮಸ್ಥಳಕ್ಕೆ ಹೋಗಿದ್ದೆ,ಅದಕ್ಕೆ ಮಾಡಲಾಗಲಿಲ್ಲ ಎಂದನಂತೆ.ಅಲ್ಲಿ ಯಾವ ದೇವರಿರುವುದು,ಅಲ್ಲಷ್ಟೇ ಹೋಗಿದ್ದೀಯಾ ಎಂದೆಲ್ಲ ಅವನನ್ನು ವಿಚಾರಿಸಲು,ಶಿವ ದೇವರಿದ್ದರು,ಅಲ್ಲಿಂದ ಸುಬ್ರಹ್ಮಣ್ಯ ಮತ್ತು ಬೇರೆ ದೇವಸ್ಥಾನಕ್ಕೂ ಹೋಗಿದ್ದೆವು ಎಂದನಂತೆ.ಅವನನ್ನು ಶಾಲೆ ಬಿಟ್ಟ ಮೇಲೆ ಕಳುಹಿಸುವಾಗ ಅವನ ಶಿಕ್ಷಕರು ಅವನ ವರದಿ ಒಪ್ಪಿಸಿದರು.

   ಗುರುವಾರ ದಿನ ಹೊರಡುವಾಗಲೇ ಅವನಲ್ಲಿ ಎಲ್ಲೋ ತುರುಗಾಟಕ್ಕೆ ಹೊರಟಿದ್ದೇವೆ ಎಂಬ ಉತ್ಸಾಹ.ಶುಕ್ರವಾರ ಪುತ್ತೂರಿನಲ್ಲಿ ಸ್ನೇಹಿತರೊಬ್ಬರ ಮನೆಯಲ್ಲಿ ಮದುವೆ ಕಾರ್ಯಕ್ರಮ ಮುಗಿಸಿ ಹನುಮಗಿರಿ ದೇವಸ್ಥಾನಕ್ಕೆ ಹೋದೆವು.ಅಲ್ಲಿಯ ದೊಡ್ಡ ಹನುಮ ಮತ್ತು ರಾಮನ ಮೂರ್ತಿಯನ್ನೂ ಕಂಡು ಸಂತಸ ಪಟ್ಟವನು,ರಾಮಾಯಣದ ತುಣುಕುಗಳ ಕೆತ್ತನೆಯನ್ನು ಕಂಡು ಅಪ್ಪ ಹೇಳಿದ ಕಥೆಯೊಂದಿಗೆ ತುಲನೆ ಮಾಡಿದನು.

     ಮಾರನೇ ದಿನ ಬೆಳಿಗ್ಗೆ ಹೊರಟು ಧರ್ಮಸ್ಥಳ ತಲುಪಿದಾಗ ೧೧.ಮೊದಲೇ ದೇವಸ್ಥಾನದ ಹೊರಭಾಗದಲ್ಲಿರುವ ಸಹ್ಯಾದ್ರಿಯಲ್ಲಿ ಕಾಯ್ದಿರಿಸಿದ್ದ ಕೋಣೆಯಲ್ಲಿ ಲಗೇಜನ್ನು ಇಟ್ಟು,ದೇವಸ್ಥಾನದಲ್ಲಿ ದರ್ಶನ ಪಡೆಯಲು ಹೋದೆವು.ದರ್ಶನದ ಸಾಲಿಗೆ ಹೋಗುವ ಮೊದಲು ಅಲ್ಲಿಯೇ ಪಕ್ಕದಲ್ಲಿ ಚಪ್ಪಲಿ ಮತ್ತು ಲಗೇಜು ಇಡಲು ಒಂದು ಕೌಂಟರ್,ದರ್ಶನ ಪಡೆದು ಅದೇ ದಿನ ಅಲ್ಲಿಂದ ಹೊರಡುವವರಿಗೆ ಲಗೇಜು ಕೌಂಟರ್ ಬಹಳ ಉಪಯೋಗಕಾರಿ.ದರ್ಶನದ ಸಾಲು ಹನುಮಂತನ ಬಾಲದಂತೆ ಬಹಳೇ ಉದ್ದವಿತ್ತು,ಆದರೆ ಎಲ್ಲಿಯೂ ನೂಕು ನುಗ್ಗಲು ಇಲ್ಲದ ಸುವ್ಯವಸ್ಥಿತ ವ್ಯವಸ್ಥೆ.ಬ್ಲಾಕ್ ೧,೨,೩,೪ ಎಂಬ ನಾಲ್ಕು ವಿಭಾಗ,ಬ್ಲಾಕ್ ಒಂದರಲ್ಲಿ ಎ೧,ಎ೨ ಎಂಬ ಉಪವಿಭಾಗಗಳು.
   ಪ್ರತಿ ವಿಭಾಗದಲ್ಲೂ ಕುಡಿಯುವ ನೀರಿನ ವ್ಯವಸ್ಥೆ, ಅಲ್ಲದೇ ನೀರಿನ ಬಾಟಲಿ,ಮಕ್ಕಳ ಹಸಿವು ನೀಗಿಸಲು ಬಿಸ್ಕಿಟು,ತಂಪು ಪಾನೀಯದ ಬಾಟಲಿಯ ಸಣ್ಣ ಅಂಗಡಿಯಿದ್ದು,ಉಪಯೋಗಿಸಿದ ನಂತರ ಬಿಸಾಡಲು ಕಸದ ಬುಟ್ಟಿಯ ವ್ಯವಸ್ಥೆ.ಒಂದೆರಡು ವಿಭಾಗದ ನಂತರ ಶೌಚಾಲಯ.
   ಸಾಲಿನಲ್ಲಿ ಸಾಗುವಾಗ ಅಕ್ಕ ಪಕ್ಕ ನಿಂತವರೊಬ್ಬರು ಅಪರೂಪಕ್ಕೆ ಸಿಕ್ಕ ಅಕ್ಕ ತಂಗಿಯರು. ತಮ್ಮ‌ ಮನೆಯವರ ಸಂಬಂಧಿಕರ ಸುದ್ದಿಗಳನ್ನು ಮಾತನಾಡುತ್ತಾ ಒಂದು ಬ್ಲಾಕ್ ಸಾಗಿತು.ಇನ್ನು ಮಾತನಾಡಲು ಅವರಿಗೆ ಅಕ್ಕ ಪಕ್ಕ ನಿಂತವರ ಸುದ್ದಿಯನ್ನು ಹೇಳಿಕೊಳ್ಳತೊಡಗಿದರು.ಅಲ್ಲಿ‌ ನೋಡೆ ಎಲ್ಲರ ಕೈಯಲ್ಲೂ ಮೊಬೈಲ್ ಇದೆ,ಒಂದು ವರ್ಷದ ಪುಟ್ಟ ಮಗುವೂ ಕಾರ್ಟೂನ್,ತಂದೆ ತಾಯಿಯರಿಬ್ಬರೂ ಒಂದೊಂದು ಮೊಬೈಲ್ ಹಿಡಿದು ಕೂತಿದೆ ನೋಡೆ ಎಂದು ತೋರಿಸಿಕೊಳ್ಳತೊಡಗಿದರು.ಇನ್ಯಾವುದೋ‌ ಮಗು ಅತ್ತಾಗ,ಅಯ್ಯೋ ಮೊಬೈಲ್ ಕೊಡಿ ಸುಮ್ಮನಾಗುತ್ತೆ ಎಂದು ಅವರೇ ಸಮಾಧಾನ ಮಾಡಿದರು.ನವಜೋಡಿಯೊಂದು ಬಿಡದೇ ಮಾತನಾಡುತ್ತ ಅವರ ಲೋಕದಲ್ಲೇ ಇದ್ದನ್ನು ಕಂಡು ಅದರ ಕುರಿತು ಮಾತನಾಡತೊಡಗಿದರು.
   ಮಕ್ಕಳೆಲ್ಲ ಸಾಲಾಗಿ ನಿಂತಾಗ ಗ್ರಿಲ್ಸ ಮೇಲೆ ಹತ್ತಿ ಇಳಿಯುವ ಆಟವನ್ನು ಆಡುತ್ತಿದ್ದರೆ,ಬೆಳಿಗ್ಗೆ ಬೇಗ ಎದ್ದು ಕೇಶ ಮುಂಡನ ಮಾಡಿಸಿಕೊಂಡ ಹೊಸತನದ ಕಿರಿಕಿರಿಯೋ,ಊಟ ನಿದ್ರೆ ಸರಿಯಿಲ್ಲದೇ ಹಠ ಮಾಡುತ್ತ ಕೆಲವು‌ ಮಕ್ಕಳು.ಸಣ್ಣ ಪುಟಾಣಿ‌ ಮಕ್ಕಳಂತೂ ತಾಯಿ ಹಾಲುಣಿಸಿ,ಬಾಟಲಿ ನೀಡಿ ,ಆಟ ಆಡಲು ಆಟಿಕೆ ನೀಡಿ ಹಠವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದವು.ಬಿಸ್ಕಿಟುಗಳನ್ನು ತಿಂದು ಪ್ಲಾಸ್ಟಿಕನ್ನು ಕಸದ ಬುಟ್ಟಿಯತ್ತ ಬಿಸಾಡದೇ ಕಾಲ ಬುಡದಲ್ಲೇ ಹಾಕಿ ಕೆಲವು ಮಕ್ಕಳು ಆಡುತ್ತಿದ್ದವು.
    ಕೆಲವು ಹಿರಿಯರು ಸೇರಿ ಬ್ರಹ್ಮ ಮುರಾರಿ ಸುರಾರ್ಜಿತ ಲಿಂಗಂ ಎಂದು ಸಾಲಾಗಿ ನಿಂತು ಹಾಡತೊಡಗಿದ್ದರೆ,ಕೆಲವರು ಓಂ ನಮಃ ಶಿವಾಯ ಎಂದು ಪಠಿಸುತ್ತ ನಡೆಯುತ್ತಿದ್ದರು.ಸಾಲು ಸಾಗುವುದು ನಿಧಾನವಾದನ್ನು ಕಂಡು ನಿಂತಲ್ಲೇ ಜಾಗ ಮಾಡಿಕೊಂಡು ಕುಳಿತುಕೊಳ್ಳುತ್ತಾ ಸಾಗುತ್ತಿದ್ದ ಕೆಲವರ ಗುಂಪು.ಸೇವೆಗಳ ದರವನ್ನು ಹೇಳಿ ಹಣವನ್ನು ಸಿದ್ಧಪಡಿಸಿಕೊಂಡಿದ್ದರೆ ಸಾಲು ಸಾಗಲು ಸುಲಭ ಎಂದು ಮೈಕನಲ್ಲಿ ಹೇಳಲಾಗುತ್ತಿತ್ತು,ಅದರಂತೆ ಹಣವನ್ನು ನೀಡಿ ಚಿಲ್ಲರೆ ಪಡೆದು ಸೇವೆ ಚೀಟಿ ಪಡೆದು ಸಾಲು ಸಾಗಿ ಅಂತೂ ಎ೧ ಬ್ಲಾಕ್ ತಲುಪಿತು.

dharmasthala ಗೆ ಚಿತ್ರದ ಫಲಿತಾಂಶ
    ಮಗರಾಯನಿಗೆ ನಿದ್ರೆ,ಹಸಿವು ನಿಂದ ಎತ್ತಿಕೊ ಎಂದೆಲ್ಲ ರಂಪಾಟ ಮಾಡುತ್ತಾ ಜಾಸ್ತಿಯಾಗಿ ಎತ್ತಿಕೊಂಡೇ ದೇವರ ದರ್ಶನಕ್ಕಾಗಿ ದೇವಸ್ಥಾನದ ಎದುರು ಬಂದು ತಲುಪಿದೆವು.ಅದರ ನಡುವೆ ಜೋರು ಮಳೆ ಶುರುವಾಯಿತು. ದೇವರ ದರ್ಶನ ಪಡೆದು ಹೊರಬರುತ್ತಿದ್ದಂತೆ  ಮಧ್ಯಾಹ್ನ ೩ಗಂಟೆ,ಜೋರು ಮಳೆ,ಛತ್ರಿ ಬಿಡಿಸಿ ಅನ್ನಪೂರ್ಣ ಉಪಾಹಾರಗೃಹ ತಲುಪಲು ಊಟ ತಯಾರಿತ್ತು.ತುಂಬಾ ಹಸಿವಿನಿಂದ ಇದ್ದ ನಮಗೆ ಅನ್ನದ ರುಚಿಯೂ,ಬೆಲೆಯೂ ಜಾಸ್ತಿಯೇ ಎಂದು ತಿಳಿಯಿತು.ಅನ್ನ,ಸಾರು,ಸಿಹಿಯಿಂದ ಕೂಡಿದ ಅನ್ನ ಪ್ರಸಾದ,ಅನ್ನ ಚೆಲ್ಲ ಬೇಡಿ ಎಂಬ ಬರಹಗಳು.ಆ ಹಸಿವಲ್ಲಿ ಯಾರೂ ಅನ್ನ ಬಿಸಾಡದೇ ಚೆನ್ನಾಗಿ ಊಟ ಮಾಡಿದ್ದನ್ನು ಕಂಡು ಬಹಳ ಖುಶಿಯಾಯಿತು.
    ಊಟ ಮುಗಿಸಿ ಅಲ್ಲಿಂದ ೯ಕಿ.ಮೀ ದೂರದ ಸೂರ್ಯ ಗ್ರಾಮದ ದೇವಸ್ಥಾನ ತಲುಪಿದೆವು.ಅಲ್ಲಿ‌ ವರ್ಷದಲ್ಲಿ ೩ಹರಕೆಗಳನ್ನು ಹೇಳಿಕೊಂಡು ಅದು ನೇರವೇರಿದ ಮೇಲೆ‌ ಬಂದು ಹರಕೆಗೆ ತಕ್ಕಂತೆ ಮಣ್ಣಿನ ಗೊಂಬೆಗಳನ್ನು ನೀಡುವ ರೂಢಿ.ಮಕ್ಕಳಿಗಾಗಿ ಮಗು ತೊಟ್ಟಿಲು,ಮದುವೆಗಾಗಿ ಗಂಡು ಹೆಣ್ಣಿನ ಗೊಂಬೆ,ಕಛೇರಿ ಕೆಲಸಕ್ಕಾಗಿ ಕುರ್ಚಿ, ಮೇಜು ಹೀಗೆ ನಾನಾ ಗೊಂಬೆಗಳು ಕಛೇರಿಯಲ್ಲಿ ಅಕ್ಕಿ,ತೆಂಗಿನಕಾಯಿಯೊಂದಿಗೆ ಸಿಗುತ್ತದೆ.ದೇವರಿಗೆ ಒಪ್ಪಿಸಿ‌ಕೊಟ್ಟ ತೆಂಗಿನಕಾಯಿಯನ್ನು ಪ್ರಸಾದ ರೂಪದಲ್ಲಿ ಮನೆಗೆ ತಂದು ಹಂಚಿ ತಿನ್ನುವ ರೂಢಿಯಿದೆ.
    ಅಲ್ಲಿಂದ ವಾಪಸು ಧರ್ಮಸ್ಥಳ ತಲುಪಿ ಅಲ್ಲಿಯ ವಸ್ತುಸಂಗ್ರಹಾಲಯ,ಹಳೆ ಕಾರಿನ ಸಂಗ್ರಹಾಲಯ ಕಂಡು ಬಸದಿಯಲ್ಲಿ ಕೈಮುಗಿದೆವು.ಕಾರಿನ ಸಂಗ್ರಹಾಲಯದಲ್ಲಿ ಒಡೆಯರ್,ಗಾಂಧೀಜಿ ಇತ್ಯಾದಿ ಮಹಾಶಯರು ಬಳಸಿದ ಬಹಳ ಹಳೆಯ ಕಾರುಗಳೂ,ಮಂಜೂಷಾ ವಸ್ತುಸಂಗ್ರಹಾಲಯದಲ್ಲಿ ರಾಜಮಹಾರಾಜರ ಕಾಲದ ಪೀಠೋಪಕರಣಗಳೂ,ಕ್ಯಾಮರಾ, ದೂರದರ್ಶಕ,ಸಂಗೀತ ಉಪಕರಣ,ಅಡುಗೆ ಪರಿಕರಗಳು ,ಹಳೆಯ ಪ್ರತಿಮೆಗಳು ಹೀಗೆ ನೂರಾರು ಸಂಗ್ರಹಗಳಿದ್ದು ಪ್ರತಿಯೊಂದು ಚಕ್ರದಿಂದ ಮಾನವನ ವಿಕಾಸವಾದವನ್ನು ಪ್ರತಿಪಾದಿಸುವಂತೆ ಮಣ್ಣಿನ ಮಡಿಕೆಯ ಅವಶೇಷಗಳು ಕೂಡಿವೆ. ಬಂದು ದೇವಸ್ಥಾನದ 'ಸಹ್ಯಾದ್ರಿ'ಯ ಛತ್ರದಲ್ಲಿ ಆ ದಿನ ತಂಗಿದವು. ಕೋಣೆಯೂ ಸುವ್ಯವಸ್ಥಿತವೂ ,ಸ್ವಚ್ಛತೆಯಿಂದಲೂ ಕೂಡಿತ್ತು. ಮಾರನೇ ದಿನ ಬಿಸಿನೀರಿನ ಸ್ನಾನ ಮುಗಿಸಿ ಸುಬ್ರಹ್ಮಣ್ಯ ತಲುಪಿದೆವು.ಅಲ್ಲಿ ದರ್ಶನಕ್ಕಾಗಿ ಬೆಳಿಗ್ಗೆ ಬೇಗ ಹೋದ ಕಾರಣ ೯ ಗಂಟೆಗೆ ಹೋದವರು ೧೦ ಗಂಟೆಯೊಳಗೆ ದರ್ಶನದ ಅವಕಾಶ ಸಿಕ್ಕಿತು.೧೨ ಗಂಟೆಗೆ ಊಟಕ್ಕಾಗಿ ದೊಡ್ಡ ಹಾಲಿನಲ್ಲಿ ಸುಮಾರು ಸಾವಿರ ಜನರಿಗೆ ಊಟಮಾಡುವ ಅವಕಾಶವಿತ್ತು.ಊಟ ಮುಗಿಸಿ ವಾಪಸು ಧರ್ಮಸ್ಥಳ ಬರುವಾಗ ಸೌತಡ್ಕದ ಗಣಪತಿ‌ದೇವಸ್ಥಾನಕ್ಕೆ ಹೋಗಿ ಬಂದೆವು.ಅಲ್ಲಿ‌ ಹರಕೆಯಾಗಿ ದೇವರಿಗೆ ಗಂಟೆ ಕಟ್ಟುವ ಕ್ರಮವಿದೆ.ದೇವರಿಗೆ ಕೈ ಮುಗಿದು ಧರ್ಮಸ್ಥಳ ತಲುಪಿ,ಅಲ್ಲಿಯ ಬಾಹುಬಲಿ ವಿಹಾರಕ್ಕೆ ಹೋಗಿ ಬೆಂಗಳೂರಿನ ಬಸ್ಸು ಹತ್ತಲು ನಮ್ಮ‌ಚೀಲವನ್ನು ಸಿದ್ದಪಡಿಸಲು ನಮ್ಮ‌ಕೋಣೆಯತ್ತ ತೆರಳಿದೆವು.
   ರಾತ್ರಿ ಧರ್ಮಸ್ಥಳದಲ್ಲೇ ಪ್ರಸಾದ ಭೋಜನ‌ ಮುಗಿಸಿ ಬಸ್ಸು ಹತ್ತಿದಾಗ ಮಗರಾಯ ಬೆಂಗಳೂರಿಗೆ ಹೋಗೋದು ಬೇಡ,ಇಲ್ಲೇ ತಿರುಗಾಡೋಣವೆಂದು ಹಠ ಹಿಡಿದ.ಯಾತ್ರಾ ಪ್ರವಾಸವಾಗಿದ್ದರೂ ಪ್ರಯಾಸ ಪಡದೇ ಪ್ರಯಾಣದಲ್ಲೂ,ದರ್ಶನದಲ್ಲೂ ಸುವ್ಯವಸ್ಥಿತೆಯಿಂದ ಕೂಡಿದ ಧರ್ಮಸ್ಥಳಕ್ಕೆ ಬಂದು ಧನ್ಯರಾದೆವು.ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬಂತೆ ವಸ್ತು ಸಂಗ್ರಹಾಲಯದಲ್ಲಿ ಹಳೆಯ ಕಾಲದ ವಸ್ತುಗಳ ಅತಿದೊಡ್ಡ ಸಂಗ್ರಹಾಲಯಕ್ಕೆ ಭೇಟಿನೀಡಿ ವಿಶ್ವಕೋಶವನ್ನು ಓದಿದಷ್ಟೇ ಪುನೀತರಾದೆವೇನೋ ಅನಿಸಿತು.
   ಮಾನವನಾಗಿ ಹುಟ್ಟಿದ ಮೇಲೆ ಏನೇನ ಕಂಡಿ ಎಂದ ಅಣ್ಣಾವ್ರ ಹಾಡು ಒಮ್ಮೆ‌ಜೋಗದ ಗುಂಡಿಯನ್ನು ನೋಡು ಅನ್ನುತ್ತದೆ,ಈ ಸುವ್ಯವಸ್ಥಿತ ಧರ್ಮಸ್ಥಳದ ಸೊಬಗನ್ನು ಕಂಡು ಅಣ್ಣಾವ್ರು ಧರ್ಮಸ್ಥಳವನ್ನೂ ನೋಡು ಅನ್ನುತ್ತಿದ್ದರೇನೋ?


                           (ಮಂಜುವಾಣಿಯಲ್ಲಿ ಪ್ರಕಟಿತ )

Thursday, September 5, 2019





                                      ಒಂದೇ ಒಂದು ಕಾಲ್‌ ಮಾಡು ಪ್ಲೀಸ್‌…

ಪ್ರಿಯ ಇವನೇ,
ನನಗಂತೂ ಇತ್ತೀಚಿಗೆ ಮೊಬೈಲ್‌ ಗೀಳು. ಅವರಿವರ ಮೇಸೇಜು, ಪ್ರೊಫೈಲ್‌ ತಡಕಾಡುವುದು,ಅಪಡೇಟ್‌ ನೋಡುವ ಕೆಲಸವಲ್ಲ. ನೀನೇನಾದರೂ ಫೇಸ್‌ಬುಕ್ಕಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸುತ್ತೀಯಾ? ವಾಟ್ಸಾಪ್‌ನಲ್ಲಿ ನಿನ್ನಿಂದ ಒಂದು ಸಣ್ಣ ಮೇಸೇಜು ಬರಬಹುದೇ?ಅನ್ನೋ ಆಸೆ. ಅಪರಿಚಿತ ನಂಬರ್‌ನಿಂದ ಬಂದ ಕರೆಗಳನ್ನು ನಿರಾಕರಿಸುತ್ತಿದ್ದ ನನಗಂತೂ ಈಗ ಅಂತಹ ಕರೆ ಬಂದರಂತೂ, ನಿನ್ನದೇ ಕರೆ ಇರಬಹುದು ಅನ್ನೋ ಸಣ್ಣದಲ್ಲ, ದೊಡ್ಡದೇ ಆಸೆ. ಆದರೆ, ಅತಿ ಆಸೆ ಗತಿ ಕೇಡು ಎಂಬಂತೆ ಅವು ರಾಂಗ್‌ ನಂಬರಗಳೇ ಆಗಿರುತ್ತವೆ.

ಗೆಳೆಯ, ನನಗಂತೂ ಹುಣ್ಣಿಮೆಯ ದಿನವೂ ಆಕಾಶವೆಲ್ಲ ಖಾಲಿ ಖಾಲಿ ಅನ್ನಿಸುತ್ತಿದೆ.ನೀನು ಬರೆದ ಅಕ್ಷರಗಳನ್ನೇ ಮನಸು ಹಂಬಲಿಸುತ್ತಿದೆ. ಹಿಂದೆ ಬರೆದ ಪತ್ರಗಳ ಓದುತ್ತ ಕಣ್ಣು ತಂಪು ಮಾಡಿಕೊಳ್ಳುತ್ತೇನೆ. ಆದರೂ, ಅವೆಲ್ಲ ಕ್ಷಣಿಕ. ರಾಧೆ ಕೃಷ್ಣನಿಗಾಗಿ ತಪಿಸಿದಷ್ಟೋ ಅಥವಾ ಅದಕ್ಕಿಂತ ಮಿಗಿಲೋ ನಾನರಿಯೆ. ಪ್ರೀತಿಗೆ ಹೋಲಿಕೆಯುಂಟೆ? ಒಟ್ಟಿನಲ್ಲಿ, ನಿನಗಾಗಿ ಕಾಯುವುದೇ ಈ ಕ್ಷಣದ ಕೆಲಸ. ನಿನ್ನ ಪತ್ರ ಕಾಣದೇ ಇಂದಿಗೆ ಒಂದು ತಿಂಗಳು. ಅಂದರೆ, ನಾಲ್ಕು ವಾರಗಳು ಅಂದರೆ ಗಂಟೆ,ನಿಮಿಷ,ಸೆಕೆಂಡುಗಳ ಎಣಿಸುವುದೇ ಇಂದು ನನ್ನ ಕಾಯಕ.ಪ್ರತಿ ಸೆಕೆಂಡು,ನಿಮಿಷಗಳು ಯುಗಯುಗಗಳಂತೆ ಭಾಸವಾಗುತ್ತಿವೆ.

ಅಮ್ಮ ನನಗಿಷ್ಟವೆಂದು ಮಾಡಿದ ತಾಳೆಪೆಟ್ಟನ್ನು ಒಂದೆರಡು ಜಾಸ್ತಿಯೇ ಹಾಕಿಸಿಕೊಂಡು ತಿನ್ನುವವಳು, ಇಂದು ಹಸಿವಿಲ್ಲಮ್ಮ ಎಂದ ಬಿಟ್ಟ. ಅಷ್ಟಕ್ಕೇ ಬೆಚ್ಚಿದ ಅಮ್ಮ, ಏನಾಯಿತೋ ಹುಶಾರಿಲ್ಲವಾ ಎಂದೆಲ್ಲ ಕೇಳುವಾಗ ಅವಳಿಗೆ ಏನು ಉತ್ತರಿಸಲಿ.ಗೆಳತಿ ಓದಲು ಬಾರೆ ಎಂದು ಕರೆಯುವಾಗ ಮನಸಿಲ್ಲ ಎಂದರೆ ಅವಳೂ ಏನಾಯಿತೋ ಎಂದು ಕೇಳುವಾಗ ಏನು ಹೇಳಲಿ ಗೆಳೆಯ?

ಗೆಳತಿಯರೆಲ್ಲ ಮೊಬೈಲ್ಸ್‌ ಧ್ಯಾನದಲ್ಲಿದ್ದರೆ ಅವರಿಗೆಲ್ಲ ಗದರಿಸುತ್ತ ಅವರ ಮುಂದೆ ತುಷಾರ,ತರಂಗದಂಥ ಪತ್ರಿಕೆಯನ್ನೋ,ಕಥೆ ಕಾದಂಬರಿ ಓದಿ, ಅದರ ಸ್ವಾದವ ಹೇಳುತ್ತಿ¨ªೆ.ಅವರು ನಾಳೆ ನೀಲಿ ಚೂಡಿದಾರ ಹಾಕಿ ಬಾರೆ ಎಂದು ಮಾಡಿದ ವಾಟ್ಸಪ್‌ ಕಾಣದೇ ಬೇರೆ ಬಟ್ಟೆ ತೊಟ್ಟಾಗ ವಾಟ್ಸಪ್‌ ಚೆಕ್‌ ಮಾಡಿಲ್ಲ ಕಣೆ ಎನ್ನುತ್ತಿದ್ದೆ.ಈಗ ಅದೆಲ್ಲ ಸುಳ್ಳೇನೋ ಎಂಬಂತೆ ಮೊಬೈಲ್‌ ಕಡೆಗೇ ನನ್ನ ದೃಷ್ಟಿ. ಪ್ರೀತಿಯಿಂದ ಒಂದು ಕರೆ ಮಾಡಿ ನೀನು ಸೌಖ್ಯವೇ ತಿಳಿಸು.ಅಷ್ಟು ಸಾಕು ಈ ಜೀವಕ್ಕೆ…
ಇಂತಿ ನಿನ್ನ ಪ್ರೀತಿಯ,
ಉಲೂಚಿ
                                 (ಉದಯವಾಣಿಯ josh ಲ್ಲಿ ಪ್ರಕಟಿತ )

Tuesday, August 20, 2019




              ನಿನ್ನನ್ನು ಸಂಪರ್ಕಿಸುವ ಮಾರ್ಗ ಯಾವುದು?
ನೀನು ಪತ್ರದೊಂದಿಗೆ ನನಗಾಗಿ ಎರಡು ಸಾಲುಗಳ ಕವನವನ್ನು ಗೀಚತೊಡಗಿದಾಗ, ನಾನು ಸುಮ್ಮನಾಗಲಿಲ್ಲ. ಅದಕ್ಕೆ ಉತ್ತರವೆಂಬಂತೆ, ನಿನಗಾಗಿ ಕವಿತೆ ಬರೆದೆ. ಪ್ರೀತಿಯ ಇವನೇ, ನಿನ್ನಂತೆ ಪ್ರೇಮಪತ್ರದ ಅಂಕಣವನ್ನು ಹವ್ಯಾಸಕ್ಕಾಗಿ ಬರೆಯುತ್ತಿದ್ದವಳು, ನಿನ್ನಪತ್ರಗಳನ್ನು ಓದಿ ಮನಸೋತೆ. ಅಂದಿನಿಂದ ನಾನು ಬರೆಯುವ ಪ್ರೇಮ ಪತ್ರಗಳು ನಿನಗಾಗೇ ಮೀಸಲಾದವು. ನೀನು ಕೂಡ ಅದಕ್ಕೆ ಸಮ್ಮತಿಯೆಂಬಂತೆ ಮುಂಚಿಗಿಂತ ಹೆಚ್ಚು ಅಂದವಾಗಿ ಪತ್ರಗಳನ್ನು ಬರೆಯಲು ಶುರು ಮಾಡಿದೆ.
ಎಲ್ಲಕ್ಕಿಂತ ಭಿನ್ನವೆಂಬಂತೆ ನಮ್ಮ ಪ್ರೀತಿ, ಪತ್ರದಲ್ಲೇ ಸಾಗಲು ಶುರುವಾಯಿತು. ಒಬ್ಬರನ್ನೊಬ್ಬರು ಕಾಣದೆ, ಭೇಟಿಯಾಗದೆ ನಮ್ಮದೇ ಕಲ್ಪನೆಯೆಂಬಂತೆ ಇಬ್ಬರೂ ಪತ್ರ ಬರೆಯತೊಡಗಿದೆವು. ನನ್ನ ಸ್ನೇಹಿತೆಯರ ಮುಂದೆ ನಮ್ಮ ಪ್ರೀತಿಯ ಬಗ್ಗೆ ಹೇಳಿದಾಗ ಅವರಿಗೇನೋ ಹೊಟ್ಟೆಕಿಚ್ಚು. ಆದರೂ, “ಎಷ್ಟು ಲಕ್ಕಿ ನೀನು, ಇಷ್ಟು ಚೆನ್ನಾಗಿ ಪತ್ರ ಬರೆಯೋ ಹುಡುಗ ಇನ್ನು ನಿನ್ನನ್ನು ಎಷ್ಟು ಪ್ರೇಮಿಸಬಹುದು’ ಎಂದೆಲ್ಲ ಹೇಳತೊಡಗಿದರು.


ನೀನು ಪತ್ರದೊಂದಿಗೆ ನನಗಾಗಿ ಎರಡು ಸಾಲುಗಳ ಕವನವನ್ನು ಗೀಚತೊಡಗಿದಾಗ, ನಾನು ಸುಮ್ಮನಾಗಲಿಲ್ಲ. ಅದಕ್ಕೆ ಉತ್ತರವೆಂಬಂತೆ, ನಿನಗಾಗಿ ಕವಿತೆ ಬರೆದೆ. ಪತ್ರದಲ್ಲೇ ನಾವಿಬ್ಬರೂ ಮೊದಲು ಭೇಟಿಯಾಗಿ, ಮದುವೆಯಾಗಿ, ಪ್ರೀತಿ ಲಹರಿ ಸಾಗುವ ಭಾವನೆಗಳು ಪ್ರಕಟವಾದವು.ರೇಖಾಗಣಿತ, ವಿಜ್ಞಾನ, ಪ್ರಕೃತಿ, ಕನ್ನಡಾಂಬೆ, ಸಿನಿಮಾತಾರೆ,ಆಭರಣಗಳು, ಪುಸ್ತಕ, ಗಣಕಯಂತ್ರ, ಅಡುಗೆ, ಕ್ರಿಕೆಟ್‌ ಹೀಗೆ ನಾನಾ ವಿಷಯಗಳನ್ನಿಟ್ಟುಕೊಂಡು ಪ್ರೇಮಪತ್ರ ಬರೆಯುತ್ತ, ಹರಿಯುತ್ತ ಸಾಗಿತ್ತು ನಮ್ಮ ಪ್ರೀತಿಯ ಕಾವ್ಯಧಾರೆ. ನಿನ್ನ ಹೆಸರು, ಹವ್ಯಾಸ, ಇತ್ಯಾದಿ ವಿಷಯಗಳನ್ನು ಬರೆಯುತ್ತಿದ್ದ ಎರಡು ಸಾಲುಗಳಲ್ಲಿ ಅಡಗಿಸಿ, ಪದಬಂಧ ಬಿಡಿಸುವುದನ್ನು ಕಲಿಸಿದೆ ನನಗೆ.

ಹೀಗೆ ಸಾಗುತ್ತಿದ್ದ ನಮ್ಮ ಪತ್ರ ವ್ಯವಹಾರ, ನಾಲ್ಕು ವಾರಗಳಿಂದ ನಿಂತಿದೆಯಲ್ಲ ಗೆಳೆಯ? ಪ್ರತಿ ಬಾರಿ ನಿನ್ನ ಪತ್ರ ಓದಲು ಹಾತೊರೆಯುತ್ತಿದ್ದ ಮನಸ್ಸು ಈಗ ಪತ್ರವಿಲ್ಲದೇ ಕಂಗಾಲಾಗಿದೆ. ನಿನ್ನನ್ನು ಸಂಪರ್ಕಿಸುವ ಬೇರೆ ವಿಧಾನವೇ ತಿಳಿಯದಾಗಿದೆ. ನಿನ್ನ ನಿಜವಾದ ಹೆಸರು, ವಿಳಾಸ, ಫೇಸ್‌ಬುಕ್‌ ಐಡಿ, ಇ ಮೇಲ್‌, ವಾಟ್ಸಾಪ್‌ ನಂಬರ್‌ ಯಾವುದನ್ನೂ ನಾನು ಅರಿಯೆ. ನಾನು ಬರೆದ ಹಿಂದಿನ ಎರಡು ಪತ್ರದಲ್ಲಿ ನನ್ನ ಮೊಬೈಲ್‌ ಸಂಖ್ಯೆಯನ್ನು ಕವನದ ಸಾಲಲ್ಲಿ ಅಡಗಿಸಿದ್ದೇನೆ. ಸಾಧ್ಯವಾದರೆ, ಒಂದು ಕರೆ ಮಾಡು.
ಇಂತಿ ನಿನ್ನ ಕರೆಗಾಗಿ ಕಾಯುತ್ತಿರುವ,
ಉಲೂಚಿ
* ಸಾವಿತ್ರಿ ಶ್ಯಾನುಭಾಗ

              

Tuesday, July 30, 2019

            ಸ್ಕೂಟರ್‌ಗೆ ಜಂಭ

ಮಹೇಶ ತರಕಾರಿ ವ್ಯಾಪಾರ ನಡೆಸುತ್ತಿದ್ದನು. ಅವನ ಬಳಿ ಸೈಕಲ್‌ ಇತ್ತು. ವ್ಯಾಪಾರ ಚೆನ್ನಾಗಿ ಕುದುರುತ್ತಲೇ ಒಂದು ಸ್ಕೂಟರನ್ನು ಕೊಂಡು ಅದರಲ್ಲಿ ತರಕಾರಿ ಮಾರಲು ಶುರುಮಾಡಿದನು. ಸೈಕಲನ್ನು ಅಂಗಡಿಯ ಸಹಾಯಕ ರಾಮುವಿಗೆ ದಾನವಾಗಿ ಕೊಟ್ಟನು.
ಒಮ್ಮೆ ಮಹೇಶ ಮತ್ತು ರಾಮು ಅಂಗಡಿಯಲ್ಲಿ ಕೆಲಸದಲ್ಲಿ ನಿರತರಾಗಿದ್ದರು. ಸ್ಕೂಟರ್‌ ಮತ್ತು ಸೈಕಲ್ಲು ಅಕ್ಕಪಕ್ಕವೇ ನಿಂತಿತ್ತು. ಸ್ಕೂಟರ್‌ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳಲು ಶುರುಮಾಡಿತು. “ನೋಡು, ಎಲ್ಲರಿಗೂ ನಾನೆಂದರೆ ಅಚ್ಚುಮೆಚ್ಚು. ಸ್ಕೂಲಿಗೆ ಮಕ್ಕಳನ್ನು ಬಿಡಲು, ತರಕಾರಿ ತರಲು ಬಳಸುತ್ತಾರೆ. ನಾನು ಮನೆಯಲ್ಲಿದ್ದರೆ ಪ್ರತಿಷ್ಠೆ , ನಾನಿಲ್ಲದೇ ಲೋಕವೇ ನಡೆಯುವುದಿಲ್ಲ’ ಎಂದೆಲ್ಲ ಹೇಳಿಕೊಳ್ಳತೊಡಗಿತು. ಸೈಕಲ್ಲು ಬೇಜಾರಾದರೂ ತೋರ್ಪಡಿಸದೇ ಸುಮ್ಮನೆ ನಿಂತಿತ್ತು.
ಸ್ವಲ್ಪ ದಿನ ಕಳೆದಂತೆ ರಾತ್ರಿ ಅಂಗಡಿ ಮುಚ್ಚಿ ಮಹೇಶ ಮತ್ತು ರಾಮು ಅವರವರ ಮನೆಗೆ ತೆರಳಲು ಅಣಿಯಾದರು. ರಾಮು ಮನೆಗೆ ಸ್ವಲ್ಪ ಸಾಮಾನು ಕೊಳ್ಳುವುದಿದೆ ಎಂದು ಪಕ್ಕದ ಬೀದಿಗೆ ಹೋದನು. ಮಹೇಶ ಸ್ಕೂಟರಿನಲ್ಲಿ ಹೋಗುವಾಗ ದಾರಿಯಲ್ಲಿ ಮಧ್ಯ ಸ್ಕೂಟರ್‌ ಕೆಟ್ಟು ನಿಂತಿತು. ಅಷ್ಟರಲ್ಲಿ ರಾಮು ಸೈಕಲ್‌ನಲ್ಲಿ ಬಂದನು. ಮಹೇಶ ಸ್ಕೂಟರನ್ನು ಅಲ್ಲಿಯೇ ಬಿಟ್ಟು ರಾಮು ಜೊತೆ ಸೈಕಲ್‌ನಲ್ಲಿ ಮನೆಗೆ ಹೋದನು. ಆ ರಾತ್ರಿ ಚಳಿಯಲ್ಲಿ ಸ್ಕೂಟರ್‌ ನಡುಗಿತು. ಮರುದಿನ ರಿಪೇರಿಯವನು ಸ್ಕೂಟರ್‌ ಸರಿಯಾಗಲು ಒಂದು ವಾರ ತಗುಲುತ್ತದೆ ಎಂದು ಹೇಳಿದ. ಅಷ್ಟು ಕಾಲ ಮಹೇಶ ಸೈಕಲ್‌ನಲ್ಲೇ ಪ್ರಯಾಣಿಸಿದ. ತಾನಿಲ್ಲದೆ ಲೋಕವೇ ನಡೆಯುವುದಿಲ್ಲ ಎಂದು ಬಡಾಯಿ ಕೊಚ್ಚಿಕೊಂಡಿದ್ದು ಸ್ಕೂಟರ್‌ಗೆ ನೆನಪಾಗಿ ಪೆಚ್ಚಾಯಿತು.
                                  (ಉದಯವಾಣಿಯ ಚಿನ್ನಾರಿಯಲ್ಲಿ  ಪ್ರಕಟಿತ )
            ಸೆಲ್ಫಿ ವಿತ್‌ ಹಲಸಿನ ಹಣ್ಣು



ವೆಂಕಟಾಪುರದಲ್ಲಿ ಸುಮಿತನೆಂಬ ಜಾಣ ಹುಡುಗನೊಬ್ಬನಿದ್ದ. ಕಲಿಕೆಯಲ್ಲಿ, ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದ. ಗುರುಗಳು ನೀಡಿದ ಕಷ್ಟಕರ ಸಮಸ್ಯೆಯನ್ನು ಬಿಡಿಸುವುದೆಂದರೆ ಬಲು ಇಷ್ಟ ಆವನಿಗೆ. ಒಮ್ಮೆ, ಶಾಲೆಯಿಂದ ಮನೆಗೆ ಹೋಗುವ ದಾರಿಯಲ್ಲಿ ಹಲಸಿನ ಹಣ್ಣಿನ ಗಾಡಿ ಅವನ ಕಣ್ಣಿಗೆ ಬಿತ್ತು. ಹಲಸಿನ ಹಣ್ಣನ್ನು ಕಂಡು ಅವನ ಬಾಯಲ್ಲಿ ನೀರೂರಿತು. ಆದರೆ ಆ ದಿನ ಅವನು ಹಣ ತಂದಿರಲಿಲ್ಲ. ಅವನ ಬ್ಯಾಗಿನಲ್ಲಿ ಮೊಬೈಲ್‌ ಇರುವುದು ನೆನಪಾಯಿತು. ಹಣ್ಣಿನ ಗಾಡಿ ಜೊತೆ ಒಂದು ಸೆಲ್ಫಿ ತೆಗೆಯೋಣವೆಂದು ಮೊಬೈಲನ್ನು ಹೊರತೆಗೆದನು. ಹಣ್ಣಿನ ಅಂಗಡಿಯ ಬಳಿ ನಿಂತು ಹಣ್ಣಿನೊಂದಿಗೆ ಸೆಲ್ಫಿಯನ್ನು ತೆಗೆದನು. ಆ ಫೋಟೋವನ್ನು ಅಮ್ಮನಿಗೆ ತೋರಿಸಿ ಖುಷಿ ಪಡುವ ಆಸೆ ಅವನದು.
ಇದನ್ನು ಕಂಡವನೇ ಅಂಗಡಿಯವನು “ಹಣ್ಣು ಬೇಕೆ?’ ಎಂದು ಕೇಳಿದನು. ಸುಮಿತನಿಗೆ ಆಸೆಯಿಂದ “ಹೌದು’ ಎನ್ನಬೇಕು ಅಂದುಕೊಂಡರೂ, ಕಾಸಿಲ್ಲದಿರುವುದು ನೆನಪಾಗಿ, “ಬೇಡ. ನಾಳೆ ಹಣ ತಂದು ಕೊಳ್ಳುತ್ತೇನೆ’ ಎಂದನು. ಇದನ್ನು ಕೇಳಿ ಅಂಗಡಿಯವನು ದಿನಾಲೂ ಹೀಗೆ ವ್ಯಾಪಾರಕ್ಕೆ ನಿಂತರೂ ಒಂದು ಪುಡಿಗಾಸು ವ್ಯಾಪಾರವೂ ಆಗುತ್ತಿಲ್ಲ ಪುಟ್ಟ, ನೀನಾದರೂ ಆಸೆ ಪಟ್ಟಿದ್ದೀಯಾ… ತಗೋ ಹಣ್ಣು ತಿನ್ನು. ನಾಳೆ ಹಣ ಕೊಡುವಿಯಂತೆ’ ಎಂದು ಎಷ್ಟು ನಿರಾಕರಿಸಿದರೂ ಒತ್ತಾಯ ಮಾಡಿ ನೀಡಿದನು.
ಸುಮಿತನಿಗೆ ಉಪಾಯವೊಂದು ಹೊಳೆಯಿತು. ಹಣ್ಣಿನೊಂದಿಗೆ ತೆಗೆದ ಸೆಲ್ಫಿಯನ್ನು ತನ್ನ ವಾಟ್ಸಾಪ್‌, ಫೇಸ್‌ಬುಕ್‌ನ ಸ್ಟೇಟಸ್‌ನಲ್ಲಿ ಹಾಕಿ “ಸೂಪರ್‌ ಹಣ್ಣು. ಕಡಿಮೆ ಬೆಲೆ, ರುಚಿ ಹೆಚ್ಚು’ ಎಂದು ವ್ಯಾಪಾರಿಯನ್ನು ಹೊಗಳಿ ಬರೆದು ಪೋಸ್ಟ್‌ ಮಾಡಿದನು. ಇದನ್ನು ಕಂಡ ಅವನ ಸ್ನೇಹಿತರು ತಾವು ಕೂಡಾ ಹಣ್ಣಿನ ಗಾಡಿಗೆ ಭೇಟಿ ಕೊಟ್ಟರು. ಅವರೂ ಸುಮಿತನಂತೆಯೇ ಸೆಲ್ಫಿಯನ್ನು ತೆಗೆದುಕೊಂಡು ಇಂಟರ್‌ನೆಟ್‌ನಲ್ಲಿ ಶೇರ್‌ ಮಾಡಿದರು. ಇದರಿಂದ ದಿನೇ ದಿನೇ ವ್ಯಾಪಾರಿಯ ವ್ಯಾಪಾರವು ಚೆನ್ನಾಗಿ ಕುದುರ ತೊಡಗಿತು. ಅಂದಿನಿಂದ ಅವನ ಅಂಗಡಿಗೆ “ಸೆಲ್ಫಿ ಪ್ರೊಟ್‌ ಶಾಪ್‌’ ಎಂಬ ಹೆಸರು ಬಂದಿತು.

ಕೆಲ ದಿನಗಳ ನಂತರ ಸುಮಿತ್‌ ಹಲಸಿನ ಹಣ್ಣಿನ ಗಾಡಿಯ ಮುಂದೆ ನಡೆದುಹೋಗುವಾಗ ವ್ಯಾಪಾರಿ ಅವನನ್ನು ಕರೆದನು. ಒಂದು ಬುಟ್ಟಿ ತುಂಬಾ ಹಲಸಿನ ತೊಳೆಗಳನ್ನು ಕೊಟ್ಟು “ನಿನ್ನಿಂದ ನನ್ನ ವ್ಯಾಪಾರ ಕುದುರಿತು. ನಿನಗೆ ಧನ್ಯವಾದಗಳು’ ಎಂದನು. ಸುಮಿತನಿಗೆ ತುಂಬಾ ಖುಷಿಯಾಯಿತು.
     (ಉದಯವಾಣಿಯ ಚಿನ್ನಾರಿಯಲ್ಲಿ  ಪ್ರಕಟಿತ )