ಧರ್ಮಸ್ಥಳ ಯಾತ್ರಾ ಪ್ರವಾಸ
ಶಾಲೆಯಲ್ಲಿ ಹೋಂವರ್ಕ ಯಾಕೆ ಮಾಡಿಲ್ಲ ಎಂದು ಮಗನನ್ನು ಕೇಳಿದಾಗ ಪುಟ್ಟ ತೊದಲು ನುಡಿಗಳಲ್ಲಿ ಧರ್ಮಸ್ಥಳಕ್ಕೆ ಹೋಗಿದ್ದೆ,ಅದಕ್ಕೆ ಮಾಡಲಾಗಲಿಲ್ಲ ಎಂದನಂತೆ.ಅಲ್ಲಿ ಯಾವ ದೇವರಿರುವುದು,ಅಲ್ಲಷ್ಟೇ ಹೋಗಿದ್ದೀಯಾ ಎಂದೆಲ್ಲ ಅವನನ್ನು ವಿಚಾರಿಸಲು,ಶಿವ ದೇವರಿದ್ದರು,ಅಲ್ಲಿಂದ ಸುಬ್ರಹ್ಮಣ್ಯ ಮತ್ತು ಬೇರೆ ದೇವಸ್ಥಾನಕ್ಕೂ ಹೋಗಿದ್ದೆವು ಎಂದನಂತೆ.ಅವನನ್ನು ಶಾಲೆ ಬಿಟ್ಟ ಮೇಲೆ ಕಳುಹಿಸುವಾಗ ಅವನ ಶಿಕ್ಷಕರು ಅವನ ವರದಿ ಒಪ್ಪಿಸಿದರು.
ಗುರುವಾರ ದಿನ ಹೊರಡುವಾಗಲೇ ಅವನಲ್ಲಿ ಎಲ್ಲೋ ತುರುಗಾಟಕ್ಕೆ ಹೊರಟಿದ್ದೇವೆ ಎಂಬ ಉತ್ಸಾಹ.ಶುಕ್ರವಾರ ಪುತ್ತೂರಿನಲ್ಲಿ ಸ್ನೇಹಿತರೊಬ್ಬರ ಮನೆಯಲ್ಲಿ ಮದುವೆ ಕಾರ್ಯಕ್ರಮ ಮುಗಿಸಿ ಹನುಮಗಿರಿ ದೇವಸ್ಥಾನಕ್ಕೆ ಹೋದೆವು.ಅಲ್ಲಿಯ ದೊಡ್ಡ ಹನುಮ ಮತ್ತು ರಾಮನ ಮೂರ್ತಿಯನ್ನೂ ಕಂಡು ಸಂತಸ ಪಟ್ಟವನು,ರಾಮಾಯಣದ ತುಣುಕುಗಳ ಕೆತ್ತನೆಯನ್ನು ಕಂಡು ಅಪ್ಪ ಹೇಳಿದ ಕಥೆಯೊಂದಿಗೆ ತುಲನೆ ಮಾಡಿದನು.
ಮಾರನೇ ದಿನ ಬೆಳಿಗ್ಗೆ ಹೊರಟು ಧರ್ಮಸ್ಥಳ ತಲುಪಿದಾಗ ೧೧.ಮೊದಲೇ ದೇವಸ್ಥಾನದ ಹೊರಭಾಗದಲ್ಲಿರುವ ಸಹ್ಯಾದ್ರಿಯಲ್ಲಿ ಕಾಯ್ದಿರಿಸಿದ್ದ ಕೋಣೆಯಲ್ಲಿ ಲಗೇಜನ್ನು ಇಟ್ಟು,ದೇವಸ್ಥಾನದಲ್ಲಿ ದರ್ಶನ ಪಡೆಯಲು ಹೋದೆವು.ದರ್ಶನದ ಸಾಲಿಗೆ ಹೋಗುವ ಮೊದಲು ಅಲ್ಲಿಯೇ ಪಕ್ಕದಲ್ಲಿ ಚಪ್ಪಲಿ ಮತ್ತು ಲಗೇಜು ಇಡಲು ಒಂದು ಕೌಂಟರ್,ದರ್ಶನ ಪಡೆದು ಅದೇ ದಿನ ಅಲ್ಲಿಂದ ಹೊರಡುವವರಿಗೆ ಲಗೇಜು ಕೌಂಟರ್ ಬಹಳ ಉಪಯೋಗಕಾರಿ.ದರ್ಶನದ ಸಾಲು ಹನುಮಂತನ ಬಾಲದಂತೆ ಬಹಳೇ ಉದ್ದವಿತ್ತು,ಆದರೆ ಎಲ್ಲಿಯೂ ನೂಕು ನುಗ್ಗಲು ಇಲ್ಲದ ಸುವ್ಯವಸ್ಥಿತ ವ್ಯವಸ್ಥೆ.ಬ್ಲಾಕ್ ೧,೨,೩,೪ ಎಂಬ ನಾಲ್ಕು ವಿಭಾಗ,ಬ್ಲಾಕ್ ಒಂದರಲ್ಲಿ ಎ೧,ಎ೨ ಎಂಬ ಉಪವಿಭಾಗಗಳು.
ಪ್ರತಿ ವಿಭಾಗದಲ್ಲೂ ಕುಡಿಯುವ ನೀರಿನ ವ್ಯವಸ್ಥೆ, ಅಲ್ಲದೇ ನೀರಿನ ಬಾಟಲಿ,ಮಕ್ಕಳ ಹಸಿವು ನೀಗಿಸಲು ಬಿಸ್ಕಿಟು,ತಂಪು ಪಾನೀಯದ ಬಾಟಲಿಯ ಸಣ್ಣ ಅಂಗಡಿಯಿದ್ದು,ಉಪಯೋಗಿಸಿದ ನಂತರ ಬಿಸಾಡಲು ಕಸದ ಬುಟ್ಟಿಯ ವ್ಯವಸ್ಥೆ.ಒಂದೆರಡು ವಿಭಾಗದ ನಂತರ ಶೌಚಾಲಯ.
ಸಾಲಿನಲ್ಲಿ ಸಾಗುವಾಗ ಅಕ್ಕ ಪಕ್ಕ ನಿಂತವರೊಬ್ಬರು ಅಪರೂಪಕ್ಕೆ ಸಿಕ್ಕ ಅಕ್ಕ ತಂಗಿಯರು. ತಮ್ಮ ಮನೆಯವರ ಸಂಬಂಧಿಕರ ಸುದ್ದಿಗಳನ್ನು ಮಾತನಾಡುತ್ತಾ ಒಂದು ಬ್ಲಾಕ್ ಸಾಗಿತು.ಇನ್ನು ಮಾತನಾಡಲು ಅವರಿಗೆ ಅಕ್ಕ ಪಕ್ಕ ನಿಂತವರ ಸುದ್ದಿಯನ್ನು ಹೇಳಿಕೊಳ್ಳತೊಡಗಿದರು.ಅಲ್ಲಿ ನೋಡೆ ಎಲ್ಲರ ಕೈಯಲ್ಲೂ ಮೊಬೈಲ್ ಇದೆ,ಒಂದು ವರ್ಷದ ಪುಟ್ಟ ಮಗುವೂ ಕಾರ್ಟೂನ್,ತಂದೆ ತಾಯಿಯರಿಬ್ಬರೂ ಒಂದೊಂದು ಮೊಬೈಲ್ ಹಿಡಿದು ಕೂತಿದೆ ನೋಡೆ ಎಂದು ತೋರಿಸಿಕೊಳ್ಳತೊಡಗಿದರು.ಇನ್ಯಾವುದೋ ಮಗು ಅತ್ತಾಗ,ಅಯ್ಯೋ ಮೊಬೈಲ್ ಕೊಡಿ ಸುಮ್ಮನಾಗುತ್ತೆ ಎಂದು ಅವರೇ ಸಮಾಧಾನ ಮಾಡಿದರು.ನವಜೋಡಿಯೊಂದು ಬಿಡದೇ ಮಾತನಾಡುತ್ತ ಅವರ ಲೋಕದಲ್ಲೇ ಇದ್ದನ್ನು ಕಂಡು ಅದರ ಕುರಿತು ಮಾತನಾಡತೊಡಗಿದರು.
ಮಕ್ಕಳೆಲ್ಲ ಸಾಲಾಗಿ ನಿಂತಾಗ ಗ್ರಿಲ್ಸ ಮೇಲೆ ಹತ್ತಿ ಇಳಿಯುವ ಆಟವನ್ನು ಆಡುತ್ತಿದ್ದರೆ,ಬೆಳಿಗ್ಗೆ ಬೇಗ ಎದ್ದು ಕೇಶ ಮುಂಡನ ಮಾಡಿಸಿಕೊಂಡ ಹೊಸತನದ ಕಿರಿಕಿರಿಯೋ,ಊಟ ನಿದ್ರೆ ಸರಿಯಿಲ್ಲದೇ ಹಠ ಮಾಡುತ್ತ ಕೆಲವು ಮಕ್ಕಳು.ಸಣ್ಣ ಪುಟಾಣಿ ಮಕ್ಕಳಂತೂ ತಾಯಿ ಹಾಲುಣಿಸಿ,ಬಾಟಲಿ ನೀಡಿ ,ಆಟ ಆಡಲು ಆಟಿಕೆ ನೀಡಿ ಹಠವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದವು.ಬಿಸ್ಕಿಟು
ಕೆಲವು ಹಿರಿಯರು ಸೇರಿ ಬ್ರಹ್ಮ ಮುರಾರಿ ಸುರಾರ್ಜಿತ ಲಿಂಗಂ ಎಂದು ಸಾಲಾಗಿ ನಿಂತು ಹಾಡತೊಡಗಿದ್ದರೆ,ಕೆಲವರು ಓಂ ನಮಃ ಶಿವಾಯ ಎಂದು ಪಠಿಸುತ್ತ ನಡೆಯುತ್ತಿದ್ದರು.ಸಾಲು ಸಾಗುವುದು ನಿಧಾನವಾದನ್ನು ಕಂಡು ನಿಂತಲ್ಲೇ ಜಾಗ ಮಾಡಿಕೊಂಡು ಕುಳಿತುಕೊಳ್ಳುತ್ತಾ ಸಾಗುತ್ತಿದ್ದ ಕೆಲವರ ಗುಂಪು.ಸೇವೆಗಳ ದರವನ್ನು ಹೇಳಿ ಹಣವನ್ನು ಸಿದ್ಧಪಡಿಸಿಕೊಂಡಿದ್ದರೆ ಸಾಲು ಸಾಗಲು ಸುಲಭ ಎಂದು ಮೈಕನಲ್ಲಿ ಹೇಳಲಾಗುತ್ತಿತ್ತು,ಅದರಂತೆ ಹಣವನ್ನು ನೀಡಿ ಚಿಲ್ಲರೆ ಪಡೆದು ಸೇವೆ ಚೀಟಿ ಪಡೆದು ಸಾಲು ಸಾಗಿ ಅಂತೂ ಎ೧ ಬ್ಲಾಕ್ ತಲುಪಿತು.
ಮಗರಾಯನಿಗೆ ನಿದ್ರೆ,ಹಸಿವು ನಿಂದ ಎತ್ತಿಕೊ ಎಂದೆಲ್ಲ ರಂಪಾಟ ಮಾಡುತ್ತಾ ಜಾಸ್ತಿಯಾಗಿ ಎತ್ತಿಕೊಂಡೇ ದೇವರ ದರ್ಶನಕ್ಕಾಗಿ ದೇವಸ್ಥಾನದ ಎದುರು ಬಂದು ತಲುಪಿದೆವು.ಅದರ ನಡುವೆ ಜೋರು ಮಳೆ ಶುರುವಾಯಿತು. ದೇವರ ದರ್ಶನ ಪಡೆದು ಹೊರಬರುತ್ತಿದ್ದಂತೆ ಮಧ್ಯಾಹ್ನ ೩ಗಂಟೆ,ಜೋರು ಮಳೆ,ಛತ್ರಿ ಬಿಡಿಸಿ ಅನ್ನಪೂರ್ಣ ಉಪಾಹಾರಗೃಹ ತಲುಪಲು ಊಟ ತಯಾರಿತ್ತು.ತುಂಬಾ ಹಸಿವಿನಿಂದ ಇದ್ದ ನಮಗೆ ಅನ್ನದ ರುಚಿಯೂ,ಬೆಲೆಯೂ ಜಾಸ್ತಿಯೇ ಎಂದು ತಿಳಿಯಿತು.ಅನ್ನ,ಸಾರು,ಸಿಹಿಯಿಂದ ಕೂಡಿದ ಅನ್ನ ಪ್ರಸಾದ,ಅನ್ನ ಚೆಲ್ಲ ಬೇಡಿ ಎಂಬ ಬರಹಗಳು.ಆ ಹಸಿವಲ್ಲಿ ಯಾರೂ ಅನ್ನ ಬಿಸಾಡದೇ ಚೆನ್ನಾಗಿ ಊಟ ಮಾಡಿದ್ದನ್ನು ಕಂಡು ಬಹಳ ಖುಶಿಯಾಯಿತು.
ಊಟ ಮುಗಿಸಿ ಅಲ್ಲಿಂದ ೯ಕಿ.ಮೀ ದೂರದ ಸೂರ್ಯ ಗ್ರಾಮದ ದೇವಸ್ಥಾನ ತಲುಪಿದೆವು.ಅಲ್ಲಿ ವರ್ಷದಲ್ಲಿ ೩ಹರಕೆಗಳನ್ನು ಹೇಳಿಕೊಂಡು ಅದು ನೇರವೇರಿದ ಮೇಲೆ ಬಂದು ಹರಕೆಗೆ ತಕ್ಕಂತೆ ಮಣ್ಣಿನ ಗೊಂಬೆಗಳನ್ನು ನೀಡುವ ರೂಢಿ.ಮಕ್ಕಳಿಗಾಗಿ ಮಗು ತೊಟ್ಟಿಲು,ಮದುವೆಗಾಗಿ ಗಂಡು ಹೆಣ್ಣಿನ ಗೊಂಬೆ,ಕಛೇರಿ ಕೆಲಸಕ್ಕಾಗಿ ಕುರ್ಚಿ, ಮೇಜು ಹೀಗೆ ನಾನಾ ಗೊಂಬೆಗಳು ಕಛೇರಿಯಲ್ಲಿ ಅಕ್ಕಿ,ತೆಂಗಿನಕಾಯಿಯೊಂದಿಗೆ ಸಿಗುತ್ತದೆ.ದೇವರಿಗೆ ಒಪ್ಪಿಸಿಕೊಟ್ಟ ತೆಂಗಿನಕಾಯಿಯನ್ನು ಪ್ರಸಾದ ರೂಪದಲ್ಲಿ ಮನೆಗೆ ತಂದು ಹಂಚಿ ತಿನ್ನುವ ರೂಢಿಯಿದೆ.
ಅಲ್ಲಿಂದ ವಾಪಸು ಧರ್ಮಸ್ಥಳ ತಲುಪಿ ಅಲ್ಲಿಯ ವಸ್ತುಸಂಗ್ರಹಾಲಯ,ಹಳೆ ಕಾರಿನ ಸಂಗ್ರಹಾಲಯ ಕಂಡು ಬಸದಿಯಲ್ಲಿ ಕೈಮುಗಿದೆವು.ಕಾರಿನ ಸಂಗ್ರಹಾಲಯದಲ್ಲಿ ಒಡೆಯರ್,ಗಾಂಧೀಜಿ ಇತ್ಯಾದಿ ಮಹಾಶಯರು ಬಳಸಿದ ಬಹಳ ಹಳೆಯ ಕಾರುಗಳೂ,ಮಂಜೂಷಾ ವಸ್ತುಸಂಗ್ರಹಾಲಯದಲ್ಲಿ ರಾಜಮಹಾರಾಜರ ಕಾಲದ ಪೀಠೋಪಕರಣಗಳೂ,ಕ್ಯಾಮರಾ, ದೂರದರ್ಶಕ,ಸಂಗೀತ ಉಪಕರಣ,ಅಡುಗೆ ಪರಿಕರಗಳು ,ಹಳೆಯ ಪ್ರತಿಮೆಗಳು ಹೀಗೆ ನೂರಾರು ಸಂಗ್ರಹಗಳಿದ್ದು ಪ್ರತಿಯೊಂದು ಚಕ್ರದಿಂದ ಮಾನವನ ವಿಕಾಸವಾದವನ್ನು ಪ್ರತಿಪಾದಿಸುವಂತೆ ಮಣ್ಣಿನ ಮಡಿಕೆಯ ಅವಶೇಷಗಳು ಕೂಡಿವೆ. ಬಂದು ದೇವಸ್ಥಾನದ 'ಸಹ್ಯಾದ್ರಿ'ಯ ಛತ್ರದಲ್ಲಿ ಆ ದಿನ ತಂಗಿದವು. ಕೋಣೆಯೂ ಸುವ್ಯವಸ್ಥಿತವೂ ,ಸ್ವಚ್ಛತೆಯಿಂದಲೂ ಕೂಡಿತ್ತು. ಮಾರನೇ ದಿನ ಬಿಸಿನೀರಿನ ಸ್ನಾನ ಮುಗಿಸಿ ಸುಬ್ರಹ್ಮಣ್ಯ ತಲುಪಿದೆವು.ಅಲ್ಲಿ ದರ್ಶನಕ್ಕಾಗಿ ಬೆಳಿಗ್ಗೆ ಬೇಗ ಹೋದ ಕಾರಣ ೯ ಗಂಟೆಗೆ ಹೋದವರು ೧೦ ಗಂಟೆಯೊಳಗೆ ದರ್ಶನದ ಅವಕಾಶ ಸಿಕ್ಕಿತು.೧೨ ಗಂಟೆಗೆ ಊಟಕ್ಕಾಗಿ ದೊಡ್ಡ ಹಾಲಿನಲ್ಲಿ ಸುಮಾರು ಸಾವಿರ ಜನರಿಗೆ ಊಟಮಾಡುವ ಅವಕಾಶವಿತ್ತು.ಊಟ ಮುಗಿಸಿ ವಾಪಸು ಧರ್ಮಸ್ಥಳ ಬರುವಾಗ ಸೌತಡ್ಕದ ಗಣಪತಿದೇವಸ್ಥಾನಕ್ಕೆ ಹೋಗಿ ಬಂದೆವು.ಅಲ್ಲಿ ಹರಕೆಯಾಗಿ ದೇವರಿಗೆ ಗಂಟೆ ಕಟ್ಟುವ ಕ್ರಮವಿದೆ.ದೇವರಿಗೆ ಕೈ ಮುಗಿದು ಧರ್ಮಸ್ಥಳ ತಲುಪಿ,ಅಲ್ಲಿಯ ಬಾಹುಬಲಿ ವಿಹಾರಕ್ಕೆ ಹೋಗಿ ಬೆಂಗಳೂರಿನ ಬಸ್ಸು ಹತ್ತಲು ನಮ್ಮಚೀಲವನ್ನು ಸಿದ್ದಪಡಿಸಲು ನಮ್ಮಕೋಣೆಯತ್ತ ತೆರಳಿದೆವು.
ರಾತ್ರಿ ಧರ್ಮಸ್ಥಳದಲ್ಲೇ ಪ್ರಸಾದ ಭೋಜನ ಮುಗಿಸಿ ಬಸ್ಸು ಹತ್ತಿದಾಗ ಮಗರಾಯ ಬೆಂಗಳೂರಿಗೆ ಹೋಗೋದು ಬೇಡ,ಇಲ್ಲೇ ತಿರುಗಾಡೋಣವೆಂದು ಹಠ ಹಿಡಿದ.ಯಾತ್ರಾ ಪ್ರವಾಸವಾಗಿದ್ದರೂ ಪ್ರಯಾಸ ಪಡದೇ ಪ್ರಯಾಣದಲ್ಲೂ,ದರ್ಶನದಲ್ಲೂ ಸುವ್ಯವಸ್ಥಿತೆಯಿಂದ ಕೂಡಿದ ಧರ್ಮಸ್ಥಳಕ್ಕೆ ಬಂದು ಧನ್ಯರಾದೆವು.ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬಂತೆ ವಸ್ತು ಸಂಗ್ರಹಾಲಯದಲ್ಲಿ ಹಳೆಯ ಕಾಲದ ವಸ್ತುಗಳ ಅತಿದೊಡ್ಡ ಸಂಗ್ರಹಾಲಯಕ್ಕೆ ಭೇಟಿನೀಡಿ ವಿಶ್ವಕೋಶವನ್ನು ಓದಿದಷ್ಟೇ ಪುನೀತರಾದೆವೇನೋ ಅನಿಸಿತು.
ಮಾನವನಾಗಿ ಹುಟ್ಟಿದ ಮೇಲೆ ಏನೇನ ಕಂಡಿ ಎಂದ ಅಣ್ಣಾವ್ರ ಹಾಡು ಒಮ್ಮೆಜೋಗದ ಗುಂಡಿಯನ್ನು ನೋಡು ಅನ್ನುತ್ತದೆ,ಈ ಸುವ್ಯವಸ್ಥಿತ ಧರ್ಮಸ್ಥಳದ ಸೊಬಗನ್ನು ಕಂಡು ಅಣ್ಣಾವ್ರು ಧರ್ಮಸ್ಥಳವನ್ನೂ ನೋಡು ಅನ್ನುತ್ತಿದ್ದರೇನೋ?
(ಮಂಜುವಾಣಿಯಲ್ಲಿ ಪ್ರಕಟಿತ )
No comments:
Post a Comment