Monday, September 23, 2019






                  ಈ ದಿನ ಶಾಲೆಗೆ ರಜೆ…
                              ಮಕ್ಕಳಿಗೆ ಮೋಜು, ಅಮ್ಮನಿಗೆ ಗೋಳು
ಪ್ರಿಸ್ಕೂಲ್‌ ಓದುವ ಮಗರಾಯನಿಗೆ ಮೊಹರಂ, ಓಣಂ ಎಂದು ಶಾಲೆಗೆ ಎರಡು ದಿನ ರಜೆ. ಅಯ್ಯೋ, ಮೊದಲೇ ಗೊತ್ತಿದ್ದರೆ ಗೌರಿ- ಗಣೇಶ ಹಬ್ಬಕ್ಕೆಂದು ಊರಿಗೆ ಹೋದವಳು ಇನ್ನೂ ಎರಡು ದಿನ ಅಲ್ಲಿಯೇ ಉಳಿದುಕೊಳ್ಳಬಹುದಿತ್ತು ಅಂತ ಕೈ ಕೈ ಹಿಸುಕಿಕೊಂಡೆ. ದಿನಾಲೂ ತಕರಾರಿಲ್ಲದೆ ಶಾಲೆಗೆ ಹೋಗುವ ಮಗ, ಮಧ್ಯಾಹ್ನ ಮನೆಗೆ ಬಂದ ಕೂಡಲೇ ಮಲಗುವ ಅಭ್ಯಾಸ ಮಾಡಿಕೊಂಡಿದ್ದಾನೆ. ನಿದ್ದೆ ಮುಗಿಸಿ ಎದ್ದರೆ ಅವನು ಹಿಡಿಯಲಾಗದ ಪಾದರಸ! ಒಂದು ಕ್ಷಣವೂ ಕೂರಲು ಬಿಡದಂತೆ, “ಅಮ್ಮಾ, ಹೊರಗೆ ಹೋಗುವಾ, ಅಮ್ಮಾ, ಆ ಆಟ ಆಡುವಾ, ಇದು ಮಾಡುವ ಬಾ…ಅಂತ ಪೀಡಿಸಿ, ಹೊರಗೆ ಎಳೆದೊಯ್ಯುತ್ತಾನೆ. ವಾಪಸ್‌ ಬಂದಮೇಲೆ ಕೈಕಾಲು ತೊಳೆದು, ದೇವರಿಗೆ ಪ್ರಾರ್ಥನೆ ಮಾಡಿ, ಹೋಮ್‌ವರ್ಕ್‌ ಮಾಡಲು ಕೂರುತ್ತಾನೆ. ಹೋಮ್‌ವರ್ಕ್‌ ಏನಾದ್ರೂ ಬೇಗ ಮುಗಿಯಿತೆಂದರೆ ನನ್ನ ಕಥೆ ಮುಗಿಯಿತು ಅಂತ ಅರ್ಥ! ಕಥೆ ಪುಸ್ತಕಗಳನ್ನು ಹಿಡಿದು ಆ ಕಥೆ ಹೇಳಮ್ಮ, ಇದು ಹೇಳಮ್ಮ ಎಂದು ಕೆಲವೊಮ್ಮೆ ಹೇಳಿದ್ದೇ ಕಥೆಯನ್ನು ನಾಲ್ಕಾರು ಸಲ ಹೇಳಿಸುತ್ತಾನೆ.
ಅವನೊಂದಿಗೆ ಇದ್ದರೆ ನನಗೆ ಮನೆಕೆಲಸವೂ ಸಾಗದು, ಕೆಲಸ ಮಾಡಲು ಮನಸ್ಸೂ ಬಾರದು. ಇನ್ನು ರಜೆಯೆಂದರೆ ಕೇಳಬೇಕೆ? ಬೆಳಗ್ಗಿನಿಂದ ಸಂಜೆಯ ತನಕ, ಮನೆಯವರು ಕಛೇರಿಯಿಂದ ವಾಪಸ್‌ ಬರುವವರೆಗೂ ಅವನನ್ನು ಸುಧಾರಿಸುವಷ್ಟರಲ್ಲಿ ಸಾಕು ಬೇಕಾಗಿರುತ್ತದೆ. ಮಗನಿಗೆ ರಜೆ ಇರುವ ದಿನ ಬೆಳಗ್ಗೆ ಎಂದಿಗಿಂತ ಬೇಗ ಎದ್ದು ಅಡುಗೆ, ಮನೆಕೆಲಸವನ್ನೆಲ್ಲ ಮುಗಿಸಿಬಿಡುತ್ತೇನೆ. ಯಾಕಂದ್ರೆ, ಎದ್ದ ಮೇಲೆ ಅವನು ಯಾವುದನ್ನೂ ಮಾಡಲು ಬಿಡುವುದಿಲ್ಲವಲ್ಲ!
ಮನೆಯವರನ್ನು ಕಚೇರಿಗೆ ಕಳುಹಿಸಿದಮೇಲೆ ನಾವಿಬ್ಬರೂ ಮನೆಯೊಳಗೆ ಹೊಸದೊಂದು ಪ್ರಪಂಚ ಸೃಷ್ಟಿಸಿಕೊಳ್ಳುತ್ತೇವೆ. ಅವನಿಗೆ ಕಥೆ ಬೇಕಿದ್ದರೆ ಕಥೆ, ಬಣ್ಣ ಹಚ್ಚೋಣ ಅಂದರೆ ಬಣ್ಣ, ಆಟ ಅಂದರೆ ಆಟ… ಎಲ್ಲವಕ್ಕೂ ನಾನು ರೆಡಿಯಾಗಿರಬೇಕು. ಆಗಲ್ಲ ಅನ್ನುವ ಆಯ್ಕೆಯೇ ಇಲ್ಲ. ಬಣ್ಣದ ಕ್ರೆಯಾನ್ಸ್‌, ಪೆನ್ಸಿಲ್‌, ವಾಟರ್‌ ಕಲರ್‌ ಹೀಗೆ ಏನು ಸಿಗುತ್ತದೋ, ಅದನ್ನು ಹಿಡಿದು ನಾವಿಬ್ಬರೂ ತರಕಾರಿ, ಎಲೆ, ಹಣ್ಣುಗಳ ಚಿತ್ರಕ್ಕೆ ಬಣ್ಣ ಬಳಿಯಲು ಶುರು ಮಾಡುತ್ತೇವೆ. ಅವನ ಪ್ರಕಾರ ಎಲೆಗೆ ಹಸಿರು ಬಣ್ಣವೇ ಆಗಬೇಕಿಲ್ಲ, ಕಪ್ಪು, ಕೆಂಪು, ನೀಲಿ ಯಾವುದಾದರೂ ಸರಿಯೇ! ಸ್ವಲ್ಪ ಹೊತ್ತಲ್ಲಿ ಬಣ್ಣದಾಟ ಬೋರು ಬಂದು, ಮತ್ಯಾವುದೋ ಚಟುವಟಿಕೆಯತ್ತ ಹೊರಳುತ್ತಾನೆ.
ರಜೆಯಲ್ಲವೇ ಎಂದು ತಿನ್ನಲು, ಸ್ನಾನ ಮಾಡಲು ಉದಾಸೀನವೋ, ಅಮ್ಮನ ಸಹನೆ ಪರೀಕ್ಷಿಸೋಣ ಎಂದೋ ಗೊತ್ತಿಲ್ಲ; ಆವತ್ತು ಎಲ್ಲ ಕೆಲಸವೂ ಮಂದಗತಿಯಲ್ಲಿಯೇ ಸಾಗುವುದು. ಅಷ್ಟರಲ್ಲಿ ಹೊರಗೆ ಯಾರಾದರೂ ಆಡುವ ಶಬ್ದ ಕೇಳಿದರೆ ಸಾಕು, “ಹೊರಗೆ ಹೋಗೋಣವಮ್ಮಾ’ ಎಂದು ಒಂದೇ ಹಠ. ಸರಿಯೆಂದು ಹೊರಗೆ ಆಡಲು ಹೋದರೆ, ದೊಡ್ಡ ಮಕ್ಕಳೊಂದಿಗೆ ಅವರಂತೆಯೇ ಚೆಂಡು, ಕ್ರಿಕೆಟ್‌ ಆಡುವ ಆಸೆ ಇವನಿಗೆ. “ಚೆಂಡು ತಗಲುತ್ತದೆ. ನೀನು ಆಟಕ್ಕೆ ಬೇಡ’ ಅಂತ ಇವನೊಂದಿಗೆ ಆಡವಾಡಲು ಹಿಂದೆಮುಂದೆ ನೋಡುತ್ತಾರೆ. ಆಟವಾಡುವಾಗ ಬಿದ್ದು ಪೆಟ್ಟಾದಾಗ ನಾನು ನೋಡದಿದ್ದರೆ ತಾನಾಗಿಯೇ ಎದ್ದು ಮಣ್ಣು ಜಾಡಿಸಿಕೊಳ್ಳುವವನು, ನಾನು ನೋಡುತ್ತಿದ್ದರೆ ಅತ್ತೂ ಕರೆದು ರಂಪ ಮಾಡಿಬಿಡುತ್ತಾನೆ.
ಆಟದ ನಡುವಲ್ಲಿ ಸಮಯದ ಪರಿವೆಯಿಲ್ಲ. ಹಸಿವೆಯಂತೂ ಲೆಕ್ಕಕ್ಕೇ ಇಲ್ಲ. ರಜೆಯ ದಿನ ಮಧ್ಯಾಹ್ನದ ನಿದ್ದೆಗೂ ರಜಾ. ಬಿಸಿಲಲ್ಲಿ ಹೊರಗೆ ಆಡುವುದು ಬೇಡ ಅಂದರೆ, ಆ ಹಾಡು ಹಾಕಿ ಕೊಡು, ಈ ಕಾರ್ಟೂನ್‌ ತೋರಿಸು ಅಂತ ಟಿ.ವಿ. ಮುಂದೆ ಪ್ರತಿಷ್ಠಾಪನೆಗೊಳ್ಳುತ್ತಾನೆ. ಟಿ.ವಿ. ಬೋರಾದಾಗ, ಕ್ರಾಫ್ಟ್ನ ಹೆಸರಲ್ಲಿ ಮನೆ ತುಂಬಾ ರಾಶಿ ಕಸ ಮಾಡುತ್ತಾನೆ.
ಹೀಗೆ ಎರಡು ದಿನ ರಜೆ ಕಳೆಯುವಷ್ಟರಲ್ಲಿ ಅವನ ಹಿಂದೆ ಓಡಾಡಿ ನನಗೆ ಸುಸ್ತಾಗಿಬಿಟ್ಟಿತ್ತು. ಪ್ರಿಸ್ಕೂಲ್‌ ನಡೆಸುವ ಗೆಳತಿ, “ಏನೇ ಎರಡು ದಿನ ರಜೆಯೆಂದರೆ ಹಾಗೆ ಆಕಾಶ ಮೈಮೇಲೆ ಬಿದ್ದವಳಂತೆ ಆಡ್ತೀಯಲ್ಲೇ! ನಾವು ವಾರಪೂರ್ತಿ ನೋಡಿಕೊಳ್ತೀವಿ’ ಅಂತ ನಗುತ್ತಾಳೆ. ಅವಳು ಹೇಳುವುದೇನೋ ಸರಿ. ಆದರೆ, ಶಾಲೆಯಲ್ಲಿ ಟೀಚರ್‌ ಅಂತ ಗೌರವಿಸಿ, ಹಠ ಮಾಡದೆ ಸುಮ್ಮನಿರುವ ಕಂದಮ್ಮಗಳು ಅಮ್ಮನೊಡನೆ ಅಷ್ಟೇ ಶಿಸ್ತಿನಿಂದ ಎಲ್ಲಿರುತ್ತಾರೆ? ಮಕ್ಕಳ ರಜೆ, ಅಮ್ಮಂದಿರಿಗೆ ಸಜೆ ಅನ್ನಿಸುವುದು ಅದೇ ಕಾರಣಕ್ಕೆ!
-ಸಾವಿತ್ರಿ ಶ್ಯಾನಭಾಗ್‌
                            (ಉದಯವಾಣಿಯ 'ಅವಳು'ನಲ್ಲಿ ಪ್ರಕಟಿತ )

No comments: