Monday, September 23, 2019







                       ಟೊಮ್ಯಾಟೊ ಕೀ ಬಾತ್‌


ನಿಮ್ಮ ಮನೆಯಲ್ಲಿ ಏನು ಅಡುಗೆ ಇವತ್ತು’ ಎಂದು ಪಕ್ಕದ ಮನೆಯ ಹೆಂಗಸು ನನ್ನನ್ನು ಕೇಳಿದ ದಿನಕ್ಕೂ ನಾ ಮಾಡುವ ಅಡುಗೆಗೂ ಏನೋ ಸಂಬಂಧವೆಂಬಂತೆ ಆ ದಿನ ನಾನು ಟೊಮ್ಯಾಟೊ ಸಾರು ಮಾಡಿರುತ್ತೇನೆ ಎಂದರೆ ನೀವು ನಂಬುತ್ತೀರೋ ಇಲ್ಲವೋ! ಟೊಮ್ಯಾಟೊ ಸಾರು ಮಾಡಿದ ದಿನ ಅವರ ಆರನೇ ಸೆನ್ಸ್‌ ಹೇಳುತ್ತೋ ನಾನರಿಯೇ! ಬೇಳೆ, ಬಟಾಟೆ, ಬಟಾಣಿಯೆಂದರೆ ನನ್ನ ಹೊಟ್ಟೆಗೆ ಏನೋ ದ್ವೇಷ, ತಿಂದು ಗ್ಯಾಸ್ಟ್ರಿಕ್‌ ಸಮಸ್ಯೆ ಬೇಡವೆಂದು ಇಂದು ಏನು ಅಡುಗೆ ಮಾಡಲಿ ಎಂಬ ಮಹಾನ್‌ ಪ್ರಶ್ನೆಗೆ ಉತ್ತರವೆಂಬಂತೆ ದಿಢೀರ್‌ ಎಂದು ಟೊಮ್ಯಾಟೊ ಸಾರು ಮಾಡುತ್ತೇನೆ. ಕೆಲವೊಮ್ಮೆ ದಿನ ಬಿಟ್ಟು ದಿನ ಟೊಮ್ಯಾಟೊ ಸಾರು ಮಾಡಿದ್ದು ಇದೆ. ಮನೆಯವರಂತೂ “ಹಿಂದಿನ ಜನ್ಮದಲ್ಲಿ ಟೊಮ್ಯಾಟೊ ಬೆಳೆಯುತ್ತಿದ್ದಿಯೇನೋ’ ಎಂದೂ ಕಾಡಿಸುತ್ತಾರೆ.
tomato smileys ಗೆ ಚಿತ್ರದ ಫಲಿತಾಂಶಟೊಮ್ಯಾಟೊ ಸಾರಿನಲ್ಲೇ ವಿವಿಧ ಪ್ರಯೋಗ ಮಾಡುವ ಪ್ರವೃತ್ತಿಯೂ ನನ್ನಲ್ಲಿದೆ. ಸ್ವಲ್ಪ ಬೇಳೆ ಹಾಕಿ ಟೊಮ್ಯಾಟೊ ಕೊಚ್ಚಿ ಹಾಕಿ, ರಸಂ ಪೌಡರ್‌ ಹಾಕಿ ಮಾಡುವುದು ಒಂದು ರೀತಿಯಾದರೆ, ಟೊಮ್ಯಾಟೊವನ್ನು ಬೇಯಿಸಿ ಮಿಕ್ಸಿಗೆ ಹಾಕಿ ಒಂದು ರೀತಿಯ ಸಾರು. ಅತ್ತೆ “ಸಾರಿನ ಪುಡಿಬೇಕೇನೆ?’ ಎಂದರೆ ಬೇಡ ಎನ್ನದೇ ಅದನ್ನು ತಂದು ಇವತ್ತು ಅತ್ತೆ ಮಾಡಿದ ಪುಡಿಯ ಸಾರು ಎಂಬ ಹೆಸರು. ಅಮ್ಮ ಕೊಟ್ಟಾಗ ಅಮ್ಮ ಮಾಡಿದ ಪುಡಿಯ ಸಾರು ಎಂದೂ, ತಮಿಳು ಶೈಲಿ, ಆಂಧ್ರ ಶೈಲಿ ಎಂದು ಗೂಗಲ್‌ ಬಾಬಾನಲ್ಲಿ ತಡಕಾಡಿ ಮಾಡಿದ ಸಾರು. ನಾಟಿ ಟೊಮ್ಯಾಟೊವನ್ನು ಕಿವುಚಿ ಬೆಳ್ಳುಳ್ಳಿ ಒಗ್ಗರಣೆ ಹಾಕಿದ ಸಾರು- ಹೀಗೆ ನಾನಾ ಬಗೆಯ ಸಾರನ್ನು ಮಾಡುವುದರಲ್ಲಿ ನಾನು ಪರಿ ಣಿ ತೆ.
ಇಂಜಿನಿಯರಿಂಗ್‌ ಓದಲು ಹಾಸ್ಟೆಲ್‌ ಸೇರಿದಾಗ ಅಮ್ಮನ ಅಡುಗೆಯನ್ನು ಬಹಳ ಮಿಸ್‌ ಮಾಡಿಕೊಳ್ಳುತ್ತಿದ್ದೆ. ಅವರು ಚೆನ್ನಾಗಿಯೇ ಅಡುಗೆ ಮಾಡಿದರೆ ನಮಗೆ ರೂಮ್‌ಮೇಟ್ಸ್‌ಗೆ ಸೇರದ ಕೆಲವು ಪದಾರ್ಥಗಳಿದ್ದವು. ಕೆಲವೊಮ್ಮೆ ಮ್ಯಾಗಿ ಅಥವಾ ದಾಲ್‌ ಕಿಚಡಿಯನ್ನು ಗೆಳತಿಯ ಇಲೆಕ್ಟ್ರಿಕ್‌ ಸ್ಟವ್‌ನಲ್ಲಿ ಮಾಡಿಕೊಳ್ಳುತ್ತಿದ್ದೆವು. ಮೆಸ್‌ನಲ್ಲಿ ಮಾಡಿದ ಪಲ್ಯ ಖಾಲಿಯಾದರೆ ದಿಢೀರನೇ ಟೊಮ್ಯಾಟೊ ಪಲ್ಯ ಮಾಡುತ್ತಿದ್ದರು.ಅದಕ್ಕಾಗೇ ನಾವು ಮೂವರು ಒಂದೇ ಕೋಣೆಯಲ್ಲಿರುವ ಗೆಳತಿಯರು ಊಟಕ್ಕೆ ಆದಷ್ಟು ತಡವಾಗೇ ಹೋಗುತ್ತಿದ್ದೆವು. ಪಲ್ಯ ಖಾಲಿಯಾಗಿದೆಯೇ ಎಂದು ಕಂಡು ಖಾಲಿಯಾದರೆ ನಮಗೆ ಸಂತೋಷವೋ ಸಂತೋಷ ಟೊಮ್ಯಾಟೊ ಪಲ್ಯ ತಿನ್ನಲು ಖಾಲಿಯಾಗದಿದ್ದರೆ ಹೇಗೋ ಅನ್ನ, ಸಾರನ್ನಷ್ಟೇ ತಿಂದು ತೃಪ್ತಿ ಪಟ್ಟುಕೊಳ್ಳುತ್ತಿದ್ದೆವೆನ್ನಿ. ಕಾಲೇಜಿನ ಕೊನೆಯ ಸೆಮಿಸ್ಟರ್‌ನಲ್ಲಿ ಮೆಸ್‌ ಬದಲಾಗಿ ಅಲ್ಲಿ ಒಂದೂ ದಿನವೂ ಪಲ್ಯವೂ ಖಾಲಿಯಾಗಿಲ್ಲ, ಟೊಮ್ಯಾಟೊ ಪಲ್ಯವೂ ಇಲ್ಲ. ತುಂಬಾ ಬೇಸರವಾಯಿತು.


ಕಚೇರಿ ಸೇರಿದಂತೆ ಕಾಲೇಜು ಗೆಳೆಯ/ತಿಯರೇ ನಮ್ಮದೇ ಕಚೇರಿ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರಿಂದ ಒಟ್ಟಿಗೆ ಊಟ ಮಾಡುತ್ತ, ನಮ್ಮ ಡಬ್ಬಿಯಲ್ಲಿಯ ತಿನಿಸುಗಳನ್ನು ಹಂಚಿಕೊಂಡು ತಿನ್ನುತ್ತಿದ್ದೆವು. ಹಾಗೇ ತರುತ್ತಿದ್ದರಲ್ಲಿ ಗೆಳೆಯನೊಬ್ಬ ಚಪಾತಿಯೊಂದಿಗೆ ಎಣ್ಣೆಗಾಯಿ, ಟೊಮ್ಯಾಟೊ ಪಲ್ಯ ತರುತ್ತಿದ್ದ. ಪಲ್ಯ ತಂದ ದಿನ ನನಗೆ ಹಬ್ಬವೋ ಹಬ್ಬ. ಮದುವೆಯಾಗಿ ಗರ್ಭಿಣಿಯಾದ ವಿಷಯ ತಿಳಿಸಿದ ಮಾರನೇ ದಿನ ಈ ಗೆಳತಿಗೆ ಒಂದು ಕೆ.ಜಿ. ಟೊಮ್ಯಾಟೊವನ್ನು ತಂದುಕೊಟ್ಟು ಅಮ್ಮನ ಬಳಿ ಹೇಳಿ ನನಗಾಗಿ ಪಲ್ಯ ಮಾಡಿಸಿ ತಂದಿದ್ದ.
ದೇವಸ್ಥಾನವೊಂದರಲ್ಲಿ ಊಟಮಾಡುವಾಗ ಚಟ್ನಿಯೆಂದು ಸ್ವಲ್ಪ ಬಡಿಸುವವರು ನನಗೆ ತುಸು ಜಾಸ್ತಿಯೇ ಬಡಿಸಿದರು. “ಸಂತೋಷಿ’ ಎಂದೇನೋ ಹೆಸರು ಹೇಳುತ್ತಿದ್ದರು. ಯಾವತ್ತು ಎರಡನೇ ಸಾರಿ ಬಡಿಸಲು ಬಾರದವರು ಆ ಪದಾರ್ಥವನ್ನಷ್ಟೇ ಎರಡನೇ ಬಾರಿ ತಂದರೆಂದರೆ ನನಗಿಷ್ಟವೆಂದು ದೇವರಿಗೂ ತಿಳಿಯಿತೇನೋ ಎಂದು ಆಶ್ಚರ್ಯವಾಯಿತು. ಖಾಲಿಯಾಗದೇ ಹಾಗೇ ಉಳಿದ ಆ ಪದಾರ್ಥ ಎರಡನೇ ಬಾರಿ ಬಂದಿತ್ತೆಂದು ಆಮೇಲೆ ತಿಳಿಯಿತು.
ಟೊಮ್ಯಾಟೊ ಪಲ್ಯ ಮಾಡಬೇಕೆಂದು ಜಾಲತಾಣದಲ್ಲಿ ತಡಕಾಡಿ ಎಷ್ಟೇ ಪ್ರಯತ್ನಪಟ್ಟರೂ ಗೆಳೆಯನ ಅಮ್ಮ ಮಾಡಿದಂತೆಯೋ, ಹಾಸ್ಟೆಲ್‌ ಮೆಸ್‌ನಲ್ಲಿ ಮಾಡಿದಂತೆ ರುಚಿ ಬರಲೇ ಇಲ್ಲ. ದೂರ ಸಂಬಂಧಿಯೊಬ್ಬರು ಊಟಕ್ಕೆ ಬಂದವರು ಮಾತನಾಡುತ್ತ ನನಗಿಷ್ಟವೆಂದು ಟೊಮ್ಯಾಟೊ ಪಲ್ಯದ ಸುದ್ದಿ ಬರುತ್ತಲೇ ಸಂತೋಷಿಯ ರೆಸಿಪಿ ಹೇಳಿದರು.ಅವರು ಹೊರಟು ಹೋಗುತ್ತಲೇ ಅಡುಗೆ ಮನೆಗೆ ಓಡಿ ಆ ರೆಸಿಪಿ ಪ್ರಯತ್ನಿಸಿದೆ. ಅದೇ ಮೆಸ್‌ನ ಪಲ್ಯ. ಬಹಳ ಸಂತೋಷವಾಯಿತು.ಚಪಾತಿ, ಅನ್ನ ಯಾವುದಕ್ಕೂ ನೆಂಜಿಕೊಂಡು ತಿನ್ನಲು ಸರಿ ಆ ಪಲ್ಯ.ಮಾವನವರು ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದರು. ಏನು ಅಡುಗೆ ಮಾಡಲೆಂದು ತಿಳಿಯದೇ ಬೇಳೆಸಾರು, ನನಗೆ ಸಂತೋಷ ತರುವ ಸಂತೋಷಿ (ಟೊಮ್ಯಾಟೊ ಪಲ್ಯ) ಮಾಡಿದೆ. ಚಪ್ಪರಿಸಿ ತಿಂದ ಮಾವನವರು ಮಾರನೇ ದಿನವೂ “ಅದನ್ನೇ ಮಾಡು’ ಎಂದಾಗ ನನ್ನ ಬೆನ್ನನ್ನು ನಾನೇ ತಟ್ಟುಕೊಂಡರೆ ಮನೆಯವರು “ಏನು ನಮ್ಮ ಅಪ್ಪನಿಗೂ ಕಲಿಸಿಕೊಟ್ಟಿಯಾ ಆ ನಿನ್ನ ಟೊಮ್ಯಾಟೊ ಪಲ್ಯದ ರುಚಿನಾ’ ಎಂದರು.
tomato smileys ಗೆ ಚಿತ್ರದ ಫಲಿತಾಂಶ
ನಾಳೆ ಡಬ್ಬಿ ಬೇಡ ಎಂದು ಮನೆಯವರು ಹೇಳಿದಾಗ ಮಾರನೇ ದಿನ ಬೆಳಿಗ್ಗೆ ಒಂದ್ಹ‌ತ್ತು ನಿಮಿಷ ತಡವಾಗಿ ಆರಾಮಾಗಿ ಏಳುವುದು ನನ್ನ ಅಭ್ಯಾಸ. ಆದರೆ ಮತ್ತೆ ಅವರ ಪ್ಲಾನ್‌ ಬದಲಾಗಿ ಟೀಮ್‌ ಲಂಚ್‌ ಕ್ಯಾನ್ಸಲ್‌ ಆಯಿತು. ಊಟಕ್ಕೆ ಆದರೆ ಹಾಕಿಕೊಡು ಎಂದರೆ ದಿಢೀರಾಗಿ ಏನು ಮಾಡುವುದು ಎಂಬ ಯೋಚನೆ. ಅನ್ನ ಮಾಡಿದರೆ, ಸಾರು ನೆಂಚಿಕೊಳ್ಳಲು ಪಲ್ಯ ಮಾಡುತ್ತ ಕೂರಬೇಕು.
ಅಷ್ಟೆಲ್ಲ ಮಾಡಲು ಸಾಕಷ್ಟು ಸಮಯವೇ ಬೇಕು. ಆಗ ನನಗೆ ಹೊಳೆದದ್ದು ಟೊಮ್ಯಾಟೊ ಬಾತ್‌. ಟೊಮ್ಯಾಟೊ, ಈರುಳ್ಳಿ, ಬೆಳ್ಳುಳ್ಳಿ, ಅಕ್ಕಿ ಹಾಕಿ ಚೆನ್ನಾಗಿ ಹುರಿದು ಮಾಡಿದರೆ ಮುಗಿಯಿತು.
ಸೂಪು ಮಾಡುತ್ತೇನೆಂದು ಮಾಡಿದ ಪ್ರಯೋಗ ಹತ್ತಾರು.ಗೆಳತಿಯೊಬ್ಬಳು ಟೊಮ್ಯಾಟೊ, ಈರುಳ್ಳಿ ಹಾಕಿ ಕುಕ್ಕರ್‌ನಲ್ಲಿ ಒಂದು ಸೀಟಿ ತೆಗೆದು ಮಿಕ್ಸಿಗೆ ಹಾಕಿ ಬೇಕಾದ ಪುಡಿ ಹಾಕು ಎಂದಳು. ಮನೆಯವರು “ಇದೇನು ಟೊಮ್ಯಾಟೊ ಸಾರು ಕುಡಿಯಲು ಕೊಟ್ಟಿದ್ದೀಯಾ’ ಎನ್ನಬೇಕೆ. ಟೊಮ್ಯಾಟೊ ಸೂಪಿಗಿಂತ ಅದಕ್ಕೆ ಹಾಕುವ ಕರಿದ ಬ್ರೆಡ್‌ ತಿನ್ನುವುದು ಇನ್ನಷ್ಟು ಇಷ್ಟ. ಹೊಟೇಲಿಗೆ ಹೋದರೆ “ಸೂಪು ಬೇಕಾ?’ ಎಂದು ಯಾರಾದರೂ ಕೇಳಿದರೆ, “ನನಗೆ ಟೊಮ್ಯಾಟೊ ಸೂಪು’ ಎಂದು ಹೇಳಿದರೆ ಉಳಿದವರು, “ಹೊಸ ಹೊಸದು ಯಾವುದಾದರೂ ಕುಡಿಯೇ ಅದೇನು ಟೊಮ್ಯಾಟೊ ಸೂಪು’ ಎಂದು ಅಣಕಾಡಿದರೂ ನಾನು ಕುಡಿಯುವುದು ಟೊಮ್ಯಾಟೊ ಸೂಪು.
ಪಲಾವ್‌, ಕುರ್ಮಾ, ಪನ್ನೀರ್‌, ಮಶ್ರೂಮ ಇತ್ಯಾದಿ ಪದಾರ್ಥಗಳನ್ನು ಮಾಡಲು ಟೊಮ್ಯಾಟೊ ಇರಲೇಬೇಕು.ಟೊಮ್ಯಾಟೊನಿಂದ ತಮಿಳು ಶೈಲಿಯಲ್ಲಿ ಚಟ್ನಿ, ಆಂಧ್ರ ಶೈಲಿಯಲ್ಲಿ ಶೇಂಗಾ, ಕೊತ್ತಂಬರಿ ಬೆರೆಸಿ ಮಾಡುವ ಚಟ್ನಿ ಹೀಗೆ ನಾನಾ ಬಗೆಯನ್ನು ಪ್ರಯತ್ನಿಸಿದ್ದೇನೆ. ಎಲ್ಲರ ಮನೆಯಲ್ಲಿ ಟೊಮ್ಯಾಟೊ ಕೆಜಿಗೆ ಮೂರು-ನಾಕು ರೂಪಾಯಿಗೆ ಇಳಿದಾಗ ನಾಲ್ಕಾರು ಕೆಜಿ ಬೇರೆಯ ದಿನ ಬೇಕೇ ಬೇಡವೇ ಎಂದು ತಂದರೆ ನಮ್ಮ ಮನೆಯಲ್ಲಿ ತರಕಾರಿ ತರಲು ಹೋದರೂ, ಹೋಗದಿದ್ದರೂ ವಾರಕ್ಕೆ ಒಂದೆರಡು ಕೆಜಿ ಟೊಮ್ಯಾಟೊ ಬೇಕೇ ಬೇಕು. ಕಡಿಮೆ ಬೆಲೆ ಇರುವಾಗ ಕೆಜಿಗಟ್ಟಲೆ ತಂದ ಟೊಮ್ಯಾಟೊದಿಂದ ಸಾಸು ತಯಾರಿಸಿಡುತ್ತಾರೆ ಎಂದು ಕೇಳಿ ನಾನು ಪ್ರಯತ್ನಿಸಿದೆ. ಏನು ತಪ್ಪಾಯಿತೋ ತಿಳಿಯಲಿಲ್ಲ, ರುಚಿ ಹದಗೆಟ್ಟು ತಿನ್ನಬೇಕೋ, ಬಿಸಾಡಬೇಕೋ ತಿಳಿಯದೇ ಬಂದ ನೆಂಟರಿಷ್ಟರಿಗೆಲ್ಲ ಹೊಸರುಚಿ ನೋಡಿಯೆಂದು ಹಂಚಿದೆ. ಅವರು ಒಂದೆರಡು ವರುಷವಾಯಿತು ನಮ್ಮ ಮನೆಯ ಬಳಿ ಕಾಲು ಹಾಕದೇ!
ಊರಿಗೆ ಹೋಗುವಾಗ ತಂಪು ಪೆಟ್ಟಿಗೆಯನ್ನು ಖಾಲಿ ಮಾಡಿ ಸ್ವಿತ್ಛ ಆಫ್ ಮಾಡಬೇಕೆಂದು ತರಕಾರಿಗಳನ್ನು ವಾರದ ಹಿಂದಿಂದ ತರುವುದನ್ನು ನಿಲ್ಲಿಸುತ್ತೇನೆ. ಆದರೆ ಪ್ರಯಾಣದ ಹೊತ್ತಲ್ಲಿ ತಿನ್ನಲು ಚಪಾತಿ, ಟೊಮ್ಯಾಟೊ ಸಂತೋಷಿ (ಪಲ್ಯ) ಮಾಡಿಟ್ಟುಕೊಳ್ಳುತ್ತೇನೆ. ಮಗರಾಯನಿಗೆ ಪ್ರಯಾಣವೆಂದರೆ “ಅಮ್ಮ ಚಪಾತಿ, ಪಲ್ಯ ಮಾಡಿಯಾಯಿತಾ’ ಎಂದು ಕೇಳುವಷ್ಟು ಅದು ಪ್ರಯಾಣದ ಭಾಗವೇ ಆಗಿಹೋಗಿದೆ.
ವಿದೇಶದಲ್ಲಿ ಕೆಲವು ಹಬ್ಬದ ಸಂದರ್ಭದಲ್ಲಿ ದ್ರಾಕ್ಷಿ, ಟೊಮ್ಯಾಟೊನಲ್ಲಿ ಆಟವಾಡುತ್ತ, ಒಬ್ಬರ ಮೇಲೆ ಇನ್ನೊಬ್ಬರು ಅದನ್ನು ಚೆಲ್ಲಾಡುತ್ತ ಆಡುತ್ತಾರಂತೆ. ಮನೆಯವರು ಒಮ್ಮೆ ಆ ಹಬ್ಬಕ್ಕೆ ನನ್ನನ್ನು ಕರೆದುಕೊಂಡು ಹೋಗುವುದಾಗಿ ಭರವಸೆ ನೀಡಿದ್ದಾರೆ. ನಮ್ಮ ದೇಶದಲ್ಲಿ ಇಷ್ಟವಾಗದ ಕಾರ್ಯಕ್ರಮದಲ್ಲಿ ಮಾತ್ರ ರಾಜಕಾರಣಿಗಳ ಮೇಲೆ ಟೊಮ್ಯಾಟೊವನ್ನು ಎಸೆಯುವುದು ಕೇಳಿದ್ದೇವೆ. ಆದರೆ ಅಲ್ಲಿ ಅದು ಒಂದು ಹಬ್ಬವೆಂದರೆ ನಮಗೆ ಆಶ್ಚರ್ಯವೇ ಸರಿ. ಅಯ್ಯೋ, ಅಷ್ಟನ್ನು ನಾವು ವ್ಯರ್ಥ ಮಾಡಿದೆವಲ್ಲ ಎಂದು ಕಾಡುತ್ತಿತ್ತೇನೋ! ನನಗಂತೂ ಅಷ್ಟು ಪಲ್ಯ ತಿನ್ನುವುದರಿಂದ ವಂಚಿತಳಾದೆಯಲ್ಲ ಎಂದು ಮನಸು ಕೊರಗುತ್ತಿತ್ತು. ಆದರೂ ಅವರ ಆಚರಣೆಯ ಹಿಂದೆ ಏನೋ ಅರ್ಥ ಅಡಗಿರಬೇಕಲ್ಲ. ಇಲ್ಲದಿದ್ದರೆ ಅವರ್ಯಾಕೆ ಸುಮ್ಮನೆ ಅದರಲ್ಲಿ ಆಡುತ್ತಾರೆ.
ಹುಂ! ನನಗೆ ತಿಳಿಯಿತು, ನೀವೆಲ್ಲ ಟೊಮ್ಯಾಟೊ ಬೆಲೆಯೆಷ್ಟು, ಏನು ಹೊಸರುಚಿ ಮಾಡಬಹುದು ಎಂದು ಗೂಗಲ್‌ ಬಾಬಾ, ಯೂಟ್ಯೂಬ್‌ ಬಾಬಾನ ಮೋರೆ ಹೋಗಿದ್ದೀರಾ?! ಸರಿ ನಾವೆಲ್ಲ ಹೊಸರುಚಿ ಮಾಡಿ ಹೊಸತು ಹೊಸತು ಅನುಭವಗಳೊಂದಿಗೆ ಜೀವನದಲ್ಲಿ ಹೊಸತನವನ್ನು ಕಾಣೋಣ. ಇಲ್ಲಿಗೆ ನನ್ನ ಟೊಮ್ಯಾಟೊ ಕೀ ಬಾತ್‌ ಮುಗಿಯಿತು.
ಸಾವಿತ್ರಿ ಶ್ಯಾನುಭಾಗ್‌

                                                (ಉದಯವಾಣಿಯ ಮಹಿಳಾ ಸಂಪದ ದಲ್ಲಿ ಪ್ರಕಟಿತ )

No comments: