Monday, November 19, 2018

    ಸುಮ್ಮನೆ ಹೀಗೊಂದು ಕನವರಿಕೆ


              
ಪಾರ್ಲರಿಗೆ ಹೋಗಿ ಫೇಶಿಯಲ್‌, ವ್ಯಾಕ್ಸಿಂಗ್‌ ಇತ್ಯಾದಿ ಮುಗಿಸಿಕೊಂಡು ಬಂದು, ಹಳದಿ ಶಾಸ್ತ್ರ ಇತ್ಯಾದಿ ನಡೆದು, ಎರಡು ಕೈಗಳಿಗೂ ಮೆಹೆಂದಿ, ಹಸಿರು ಗಾಜಿನ ಬಳೆತೊಟ್ಟು  ನಾಳಿನ ಮದುವೆಯ ಕನಸಿನಲ್ಲಿ ಮುಳುಗಿರುವ ಮದುವಣಗಿತ್ತಿ ನಾನು.
ಮೊಬೈಲ್‌ ರಿಂಗಣಿಸುತ್ತಲೇ ಅವನ ಕರೆಯೆಂದು ಕಾಡಿಸುವ ಗೆಳತಿಯರು, ಅವನ ಮೇಸೇಜು ನೋಡಿ ನನ್ನ ಮುಖದಲ್ಲಿ ಮೂಡಿದ ಮುಗುಳ್ನಗೆಯನ್ನು ಗಮನಿಸಿ, ಬ್ಲಿಷಿಗ್‌ ಎಂದು ಇಷ್ಟು ದಿನ ಕಾಡುತ್ತಿದ್ದ ಗೆಳತಿಯರಿಂದ ದೂರಹೋಗಬೇಕೆನ್ನುವ ಅಳುಕು. ಅವನು ನನ್ನ ಹುಟ್ಟುಹಬ್ಬದ ದಿನ ನನಗಾಗಿ ಸರ್‌ಪ್ರೈಸಾಗಿ ಹೂವಿನ ಬೊಕ್ಕೆ, ಡ್ರೆಸ್ಸನ್ನು ಕಳುಹಿಸಿದಾಗ "ತುಂಬಾ ಲಕ್ಕಿ ಕಣೇ ನೀನು, ಮುಂದಿನ ಹುಟ್ಟುಹಬ್ಬಕ್ಕೆ ಏನೇನೂ ಗಿಫ್ಟನ್ನು ಕೊಡ್ತಾನೋ' ಎಂದು ಆಕಾಶಕ್ಕೆ ಏರಿಸಿದ್ದಳು ಪ್ರಾಣ ಸ್ನೇಹಿತೆ ಗೀತಾ.
ಕಾಲೇಜು ಮುಗಿಸಿ ಕೆಲಸಕ್ಕೆ ಸೇರಿ ವರುಷ ಕಳೆದಿಲ್ಲ, ಮದುವೆ ನಿಶ್ಚಯವಾಗಿಯೇ ಬಿಟ್ಟಿತು. ಶಾಲೆ, ಕಾಲೇಜು, ಕೆಲಸವೆಂದೆಲ್ಲ ಅಲೆದು, ಮನೆಯಲ್ಲಿ ಅಡುಗೆ ಕಲಿಯಲು ಸಮಯವೇ ಆಗಲಿಲ್ಲ, ಇನ್ನೂ ಮದುವೆ ನಿಶ್ಚಯವಾದೊಡನೆ ಕಲಿಯೋಣವೆಂದರೆ, ಜಾಸ್ತಿ ಸಮಯವೇ ಇರಲಿಲ್ಲ. ಗೆಳತಿಯರೆಲ್ಲ "ಹೆದರಬೇಡವೇ, ಯೂಟ್ಯೂಬ್‌ನಲ್ಲಿ ಬೇಕಾದಷ್ಟು ರೆಸಿಪಿ ಸಿಗುತ್ತೆ ಬಿಡೆ' ಎಂದು ಧೈರ್ಯ ತುಂಬಿದರು. ಮತ್ತೂಬ್ಬಳು, "ಅವನಿಗೆ ಅಡಿಗೆ ಬರುತ್ತಾ ಕೇಳೇ' ಎಂದಳು. ಇನ್ನೊಬ್ಬಳು, "ಮ್ಯಾಗಿ ಮಾಡಿದರೆ ಆಯ್ತು ಬಿಡೆ' ಎಂದಳು!
ಕೆಲಸಕ್ಕೆ ರಾಜೀನಾಮೆ ಕೊಟ್ಟರೆ ಊರವರೆಲ್ಲ ಕೇಳಲು ಶುರುಮಾಡಿದರು. "ನನ್ನ ಕಂಪೆನಿ ಅವರ ಊರಿನಲ್ಲಿ ಇಲ್ಲ' ಎಂದರೂ ಕೇಳದೇ, "ಅಲ್ಲಿ ಹೋಗಿ ಹುಡುಕುತ್ತಿಯಾ, ಈಗಲೇ ಹುಡುಕಲು ಶುರುಮಾಡಿದ್ದಿಯಾ', ಎಂದೆಲ್ಲಾ ಕೇಳಲು ಶುರುಮಾಡಿದರು. ಅದಕ್ಕೆ ಈಗ ಯಾರು ಕೇಳಿದರೂ, "ಈಗಾಗಲೇ ಹುಡುಕಿದ್ದೇನೆ' ಎಂದು ಹೇಳಲು ಶುರುಮಾಡಿದ್ದೇನೆ.teenage girls in saree ಗೆ ಚಿತ್ರದ ಫಲಿತಾಂಶ

ಸೀರೆ ಉಡುವ ಅಆಇಈ ಕೂಡ ಗೊತ್ತಿಲ್ಲ. ಇನ್ನೂ ಬಂಗಾರ, ಕ್ರೀಮು, ಪೌಡರ್‌ ಇತ್ಯಾದಿ ಸೌಂದರ್ಯವರ್ಧಕದ ಗಂಧಗಾಳಿಯಿಲ್ಲ. ಮದುವೆಯಾದವರು ಹೀಗಿರಬೇಕು ಎಂದೆಲ್ಲ ಜನರು ಹೇಳುವಾಗ ನಾನು ಹೇಗೆ ನಿಭಾಯಿಸಬಲ್ಲೆ ಎಂಬ ಪ್ರಶ್ನೆ ನನ್ನ ಮನದಲ್ಲಿ.
ಕಚೇರಿಯ ನೊಟೀಸು ಪೀರಿಯೆಡ್ಡು ಮುಗಿದು ನನಗಾಗಿ ಉಳಿದದ್ದು, ಹದಿನೈದು ದಿನ. ಆ ಹದಿನೈದು ದಿನದಲ್ಲಿ ಅಮ್ಮನೊಂದಿಗೆ ಸೀರೆ, ಬಂಗಾರ ಇತ್ಯಾದಿ ಶಾಪಿಂಗ್‌ ಮುಗಿಸಿ, ಸೀರೆಗೆ ಫಾಲು, ಗೊಂಡೆ, ರವಿಕೆ ಹೊಲಿಸಲು ಓಡಾಡುವುದರಲ್ಲಿ, ದರ್ಜಿಯ "ಯಾವ ನೆಕ್‌ಲೇಸ್‌' ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಿ ಸುಸ್ತಾಗಿ ಹೋದೆ. "ನಮ್ಮ ಮನೆಗೆ ಚಹಾ ಕುಡಿಯಲು ಬಾರೆ' ಎಂದು ಪಕ್ಕದ ಮನೆಯ ಲೀಲಾ ಆಂಟಿ ಕರೆದದ್ದೇ ತಡ, ನೆರೆಯವರೆಲ್ಲ "ನಮ್ಮ ಮನೆಗೆ ಊಟಕ್ಕೆ , ಚಹಾಕ್ಕೆ ಬಾರೆ' ಎಂದು ಕರೆದು, ಅಪಾಯಿಂಟ್‌ಮೆಂಟ್‌ ಕೊಡಲು ನನ್ನ ತಂಗಿಯನ್ನು ಪಿ.ಎ. ಮಾಡಿಕೊಂಡೆ.
ಹೈದರಾಬಾದಿನಲ್ಲಿರುವ ಅಣ್ಣನ ಮನೆಗೆ ಎರಡು ದಿನದ ಮಟ್ಟಿಗೆ ಹೋಗಿಬರುವೆನೆಂದರೆ, ಅಪ್ಪ , "ಮದುವೆಯಾದ ಮೇಲೆ ಹೇಗೂ ಅಲ್ಲೇ ಇರುತ್ತಿ, ಬೇಕಾದಾಗ ಹೋಗಿ ಬಾ, ಬೇಕಾದರೆ ಆಗಲೇ ಅತ್ತಿಗೆ ಬಳಿ ಅಡಿಗೆ ಕಲಿತುಕೊ' ಎಂದರು. 
ಇಷ್ಟು ದಿನ ನಮ್ಮ ವಾಟ್ಸಾಪ್‌ ಗ್ರೂಪ್‌ನಲ್ಲಿ ಮದುವೆಯಾದ ಒಬ್ಬಳೇ ಸದಸ್ಯರಾದ ಸುಜಾತಾಳನ್ನು ಆಂಟಿ ಎಂದು ಕಾಡಿಸಿದವರಲ್ಲಿ ನಾನೂ ಒಬ್ಬಳು. ನಾಳೆ ಮದುವೆಯ ನಂತರ ನನ್ನನ್ನು ಹಾಗೆ ಕರೆಯವರು ಎಂಬ ಯೋಚನೆಯೂ ಆ ದಿನಗಳಲ್ಲಿ ಇರಲಿಲ್ಲ.
ಮದುವೆಯಾದ ಮೇಲೆ ಅಮ್ಮ, ಅತ್ತೆಯೊಂದಿಗೆ ಫೋನಿನಲ್ಲಿ ಕೇಳಿ ಅಡಿಗೆ, ಮನೆಕೆಲಸ ಮಾಡುವ ಪ್ಲಾನ್‌ನಲ್ಲಿ ಮದುವೆಯತ್ತ ಹೆಜ್ಜೆ ಹಾಕಲು ಅಣಿಯಾಗಿದ್ದೇನೆ. ನಾಳೆ ನನ್ನ ಮದುವೆ, ಬರಲು ಮರೆಯದಿರಿ, ಇದು ನನ್ನ ಆತ್ಮೀಯ ಕರೆಯೋಲೆ.
ಇಂತಿ,
ಸಿಂಧೂ
                                       (ಉದಯವಾಣಿಯ ಯುವ ಸಂಪದ ದಲ್ಲಿ ಪ್ರಕಟಿತ )

Read more at https://www.udayavani.com/kannada/news/womens-supplement/245234/just-dream-of-this

     ಹ್ಯಾಪಿ ಬರ್ತ್‌ಡೇ ಟೂ ಯು


ಸರಿರಾತ್ರಿ 12 ಗಂಟೆಗೆ ಗೆಳತಿ ಸೌಮ್ಯಾಳಿಂದ ಪ್ರಮೀಳಾಳಿಗೆ ಫೋನ್‌ ಬಂದಿತು. ಒಂದು ಗಂಟೆ ಇಬ್ಬರೂ ಹರಟೆ ಹೊಡೆದು ಗುಡ್‌ನೈಟ್‌ ಹೇಳಿ ನಿದ್ರಿಸಿದರು. ಮಾತನಾಡುವ ಭರಾಟೆಯಲ್ಲಿ ಬಂದಿರುವ ಎರಡು-ಮೂರು ವೈಟಿಂಗ್‌ ಕರೆಗಳು ಪ್ರಮೀಳಾಳ ಗಮನಕ್ಕೆ ಬರುವುದಿಲ್ಲ. ಬೆಳಿಗ್ಗೆ ಬೇಗ ಆರು ಗಂಟೆಗೇ ಅಮ್ಮನ ಫೋನು ರಿಂಗಣಿಸಿ, ""ಬೆಳಿಗ್ಗೆ ಇಷ್ಟು ಬೇಗ ಯಾಕಮ್ಮ ಫೋನ್‌ ಮಾಡಿದೆ'' ಎಂದು ಮಾತನಾಡಿಸಿ, ತಿಂಡಿಸ್ನಾನ ಮುಗಿಸಿ, ಅಲ್ಲೇ ಹತ್ತಿರದ ದೇವಸ್ಥಾನಗಳಿಗೆ ಭೇಟಿಕೊಟ್ಟು, ದಾರಿಯಲ್ಲಿ ಬೇಕರಿಯಲ್ಲಿ ಒಂದು ಕಿಲೋ ಕಾಜೂ ಬರ್ಫಿ ತೆಗೆದುಕೊಂಡು ಕ‌ಚೇರಿ ಸೇರಿದೊಡನೆ ಗೆಳತಿಯರೆಲ್ಲ ""ನಮಗೆ ಪಾರ್ಟಿ, ಸ್ವೀಟು, ಚಾಕಲೇಟ್‌'' ಎಂದು ಪೀಡಿಸತೊಡಗಿದರು. ಮಧ್ಯಾಹ್ನ ಗೆಳತಿಯರೊಂದಿಗೆ ಪಾರ್ಟಿ ಮುಗಿಸಿ  ಮನೆಗೆ ಬೇಗ ಪರ್ಮಿಶನ್‌ ಕೇಳಿ ಬಂದಳು. ಮನೆಗೆ ಬಂದ ಮೇಲೆ ಹಾಯಾಗಿ ಕುಳಿತು ಚಹಾ ಕುಡಿಯಲು ಸಮಯವಿಲ್ಲದಂತೆ, ಒಂದರ ಹಿಂದೆ ಒಂದರಂತೆ ಅಕ್ಕ, ಅಣ್ಣ, ಗೆಳತಿ, ಹಳೆ ಕಚೇರಿಯ ಗೆಳತಿಯರ ಕರೆಗಳು ಬರುತ್ತಿರುವಂತೆ ಬಹಳ ಕಿರಿಕಿರಿಯೆನಿಸಿತು. ಊಟ ಮಾಡಲೂ ಮನಸ್ಸಿಲ್ಲದೆ ಮೊಬೈಲ್‌ ಸ್ವಿಚ್‌ ಆಫ್ ಮಾಡಿ ಮಲಗಿಕೊಂಡಳು. ಏನು, ಈ ದಿನದ ವಿಶೇಷ ಅಂದು ಊಹಿಸುವಿರಾ?! ಹಾಂ, ಸರಿ ಇದೆ ನಿಮ್ಮ ಊಹೆ ಇಂದು ಪ್ರಮೀಳಾಳ ಹುಟ್ಟುಹಬ್ಬ.
ಎಲ್ಲರ ಬದುಕಲ್ಲೂ ಹುಟ್ಟುಹಬ್ಬವೆಂಬುದು ಬಹು ಸಂಭ್ರಮದ ದಿನ. ಬಡವರಿರಲಿ, ಶ್ರೀಮಂತರಿರಲಿ, ಜಾತಿ, ಮತ, ಭೇದವೆಂಬುದು ಹುಟ್ಟುಹಬ್ಬಕ್ಕಿಲ್ಲ. ನಾವು ಸಣ್ಣವರಿರುವಾಗ ಹೊಸ ಬಟ್ಟೆತೊಟ್ಟು ದೇವಸ್ಥಾನಕ್ಕೆ ಹೋಗಿ ಅರ್ಚನೆ ಮಾಡಿಸಿ, ತರಗತಿಯವರಿಗೆಲ್ಲ ಚಾಕಲೇಟು ಕೊಡುವ ಸಂಭ್ರಮ ಎಲ್ಲ ಮಕ್ಕಳಿಗೂ ಬಹು ಖುಷಿ ನೀಡುತ್ತದೆ ಎಂಬುದು ಸುಳ್ಳಲ್ಲ. ಆದರೆ, ನನ್ನಂತಹ ಏಪ್ರಿಲ್‌, ಮೇ ರಜೆಯಲ್ಲಿ ಹುಟ್ಟಿದವರಿಗೆ ಚಾಕಲೇಟು ಹಂಚುವ ಅವಕಾಶವಿಲ್ಲದಿದ್ದರೂ ಮನೆಯವರೊಂದಿಗೆ ಜಾಸ್ತಿ ಸಿಹಿ ತಿನ್ನುವ ಭಾಗ್ಯವಂತರು ನಾವು. ಇನ್ನೂ ಅಕ್ಟೋಬರ ರಜೆ ಎಂದರಂತೂ ನವರಾತ್ರಿಯ ಸಂಭ್ರಮದೊಂದಿಗೆ ಹುಟ್ಟುಹಬ್ಬದ ಡಬಲ್‌ ಧಮಾಕಾ. ನಮ್ಮ ಇಷ್ಟದ ತಿನಿಸುಗಳು ನಾವು ಕೇಳದೇನೇ ಮನೆಯಲ್ಲಿ ತಯಾರಾಗುವುದು ವಿಶೇಷ.
ಇಂದು ಸಂಭ್ರಮಾಚರಣೆಯ ವಿಧಾನಗಳು ಬದಲಾಗಿವೆ.ಸಂಬಂಧಿಗಳು, ವಠಾರದವರನ್ನೆಲ್ಲ ಕರೆದು ಹಾಡು ಹೇಳುವ, ಅವರವರ ವಯಸ್ಸಿನ ಅಂಕೆಯ, ಗೊಂಬೆಯ ತರಹೇವಾರಿ ಮೇಣದ ಬತ್ತಿಗಳನ್ನು ಹೊತ್ತಿಸಿ, ಕೇಕು ಕತ್ತರಿಸಿ ಆಚರಣೆ ಮಾಡುತ್ತಾರೆ. ಕೇಕಿನಲ್ಲೂ  ಛೋಟಾ ಭೀಮ…, ಕ್ರಿಕೆಟ್‌ ಇತ್ಯಾದಿ ಹಲವಾರು ಡಿಸೈನುಗಳು. ಹುಟ್ಟುಹಬ್ಬದ ಥೀಮಿನ ಹಲವಾರು ಟೋಪಿ, ಬಲೂನುಗಳು ಹುಟ್ಟುಹಬ್ಬದ ಮೆರಗನ್ನು ಹೆಚ್ಚಿಸುತ್ತವೆ. ಕೆಲವು ಮಂದಿ ಆಹ್ವಾನಿತರಿಗೆ ತಿಂಡಿಯ ವ್ಯವಸ್ಥೆ ಮಾಡಿದರೆ, ಇನ್ನು ಕೆಲವರದು ಊಟದ ವ್ಯವಸ್ಥೆ. ಕೆಲವರು "ಆಶೀರ್ವಾದವೇ ಉಡುಗೊರೆ'ಯೆಂದರೆ ಇನ್ನು ಕೆಲವರು ಉಡುಗೊರೆ ಪಡೆದು ಬಂದ ಮಕ್ಕಳಿಗೆಲ್ಲ ಬಗೆಬಗೆಯ ರಿಟರ್ನ್ ಗಿಫ್ಟ್rಗಳನ್ನು ನೀಡುವುದು ವಿಶೇಷ. ವಯಸ್ಸಿಗನುಗುಣವಾಗಿ ಆಟೋಟಗಳನ್ನು ಏರ್ಪಡಿಸಿ ಬಹುಮಾನಗಳನ್ನು ನೀಡುವ ಪದ್ಧತಿಯನ್ನು ಕೆಲವರು ಶುರುಮಾಡಿಕೊಂಡಿದ್ದಾರೆ.


happy birthday celbration ಗೆ ಚಿತ್ರದ ಫಲಿತಾಂಶ
ಮಕ್ಕಳ ಡ್ಯಾನ್ಸ್‌ , ಹಾಡುಗಳನ್ನು ಮಾಡಿಸುವವ ಕೆಲವರಾದರೆ, ಜಾದೂ ಪ್ರದರ್ಶನ ಇತ್ಯಾದಿ ಕಾರ್ಯಕ್ರಮ ಆಯೋಜಕರಿಂದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಮಕ್ಕಳ ಹುಟ್ಟುಹಬ್ಬವನ್ನು ಮದುವೆಯಂತೆ ಆಡಂಬರದಿಂದ ಆಚರಿಸುವ ತಂದೆ-ತಾಯಂದಿರಿದ್ದಾರೆ.
ಈ ಸದ್ಯ ಗೆಳತಿಯೊಬ್ಬಳು ಮಗಳ ಹುಟ್ಟುಹಬ್ಬವನ್ನು ಅನಾಥಾಲಯದಲ್ಲಿ ಮಕ್ಕಳೊಂದಿಗೆ ಆಚರಿಸಿ, ಅಲ್ಲಿಯ ಮಕ್ಕಳಿಗೆ ಸಿಹಿ ಹಂಚಿದಳು. ರಾಜಕಾರಣಿಗಳು ತಮ್ಮ ಹುಟ್ಟುಹಬ್ಬವನ್ನು ವೃದ್ಧಾಶ್ರಮದಲ್ಲಿ ಆಚರಿಸಿದ್ದನ್ನು ಸಿನೆಮಾಗಳಲ್ಲಿ ನೋಡಿರಬಹುದು.ತರಗತಿಯಲ್ಲಿ ಹುಡುಗನೊಬ್ಬ ಹುಟ್ಟುಹಬ್ಬದ ದಿನ ನಮಗೆಲ್ಲ ಪುಸ್ತಕವನ್ನು ನೀಡುತ್ತಿದ್ದದ್ದು ಈಗಲೂ ನೆನಪಿದೆ. ಎಲ್ಲರೂ ಒಂದೊಂದು ರೀತಿಯಲ್ಲಿ ಹುಟ್ಟುಹಬ್ಬದ ಆಚರಣೆಯನ್ನು ಮಾಡುತ್ತಾರೆ. ಗಾಂಧೀಜಿಯವರ ಹುಟ್ಟುಹಬ್ಬದಂದು ಶಾಂತಿ, ಸ್ವತ್ಛತೆಯ ಸಾರಗಳನ್ನು ನೆನೆದು ಶ್ರಮದಾನ ಮಾಡುವ ಪದ್ಧತಿ ಈಗಲೂ ಶಾಲಾ-ಕಾಲೇಜುಗಳಲ್ಲಿದೆ. ನೆಹರೂ, ರಾಧಾಕೃಷ್ಣ ಮುಂತಾದ ಗಣ್ಯ ಪುರುಷರ ಹುಟ್ಟುಹಬ್ಬದ ದಿನವನ್ನು ಮಕ್ಕಳ ದಿನ, ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತೇವೆ.
ಹುಟ್ಟುಹಬ್ಬದ ದಿನ ಮಕ್ಕಳಿಗೆ ನಾನಾ ರೀತಿಯ ಉಡುಗೊರೆ ಕೊಡುವ ಪಾಲಕರು ನಮ್ಮ ಸುತ್ತಲಿದ್ದಾರೆ. ಹೊಸ ಬಟ್ಟೆ, ರೇನುಕೋಟು, ಡಿಕ್ಷನರಿ, ಸೈಕಲು, ಪುಸ್ತಕ ಇತ್ಯಾದಿಯನ್ನು ಉಡುಗೊರೆ ನೀಡುವರು.ಇನ್ನು ಕೆಲವರು ದುಬಾರಿ ಬೈಕು, ಕಾರುಗಳಂತಹ ಉಡುಗೊರೆ ನೀಡುತ್ತಾರೆ. ಈಗಂತೂ ಡಿಜಿಟಲ್‌ ಯುಗವೆಂದು ಮೊಬೈಲ…, ಟ್ಯಾಬ…, ಲ್ಯಾಪ್‌ಟಾಪ್‌ ಎಂದು ಸ್ಮಾರ್ಟ್‌ ಗಿಫ್ಟ್ಗಳನ್ನು ನೀಡುತ್ತಾರೆ. ನಾಯಿ-ಬೆಕ್ಕುಗಳಂತಹ ಸಾಕುಪ್ರಾಣಿಗಳನ್ನು ಉಡುಗೊರೆ ನೀಡುತ್ತಾರೆ ಪ್ರಾಣಿ ಪ್ರೇಮದಿಂದ.
ಇವಿಷ್ಟು ಪಾಲಕರ ಆಚರಣೆಯಾದರೆ, ಗೆಳೆಯ-ಗೆಳತಿಯರೆಲ್ಲ ಸೇರಿ ಕೇಕು ಕತ್ತರಿಸಿ, ಕೇಕನ್ನು ಮುಖಕ್ಕೆ ಬಳಿದು, ಪಾರ್ಟಿ ಆಚರಿಸಿ ಎಲ್ಲರೂ ಸೇರಿ ಚಂದಾ ಹಾಕಿ ವಾಚು, ಬಟ್ಟೆ, ಇತ್ಯಾದಿ ಅವರ ಅಗತ್ಯಗಳನ್ನು ಅರಿತು ಉಡುಗೊರೆ ನೀಡುವುದು ಸಾಮಾನ್ಯ. ಇನ್ನು ಪ್ರೇಮಿಗಳಾದರೆ ಅವರಿಷ್ಟದ ಹುಡುಗಿಗೆ ಗುಲಾಬಿ, ಟೆಡ್ಡಿಬೇರ್‌, ವಜ್ರ, ಬಂಗಾರ ನೀಡಿ ಅವಳ ಮನವನ್ನು ಓಲೈಸಿಕೊಳ್ಳುತ್ತಾರೆ. ಇನ್ನೂ ನಿಶ್ಚಿತಾರ್ಥದ ನಂತರ ಹುಟ್ಟುಹಬ್ಬ ಬಂದರಂತೂ ಬಹಳ ಸಂಭ್ರಮ, ಸರ್‌ಪ್ರೈಸಾಗಿ ಹೂವಿನ ಗೊಂಚು, ಕೇಕುಗಳನ್ನು ಮನೆಗೆ ಡೆಲಿವರಿ ಮಾಡಿಸುತ್ತಾರೆ. ಮದುವೆಯ ನಂತರ ಮೊದಲ ಹುಟ್ಟುಹಬ್ಬಕ್ಕಂತೂ ಕ್ಯಾಂಡಲ್‌ ಲೈಟ್‌ ಡಿನ್ನರ್‌, ಚಾಕಲೇಟ್‌, ಆಭರಣಗಳ ಉಡುಗೊರೆ. ಮಗುವಿನ ಹುಟ್ಟುಹಬ್ಬಕ್ಕಂತೂ ಆಟಿಕೆ, ಬಟ್ಟೆಗಳ ಉಡುಗೊರೆಯಲ್ಲಿ ಒಂದೇ ತರಹದ 2-3 ಆಟಿಕೆ, ಬಟ್ಟೆಗಳಿದ್ದರೂ ಆಶ್ಚರ್ಯವಿಲ್ಲ.
ಗೆಳೆಯ/ಗೆಳತಿಯರ ಹುಟ್ಟುಹಬ್ಬಕ್ಕಾಗಿ ಕವನ/ಬರಹಗಳನ್ನು ಬರೆದು ನೀಡುವ ಗೆಳೆಯರೂ ಕೆಲವರಿದ್ದಾರೆ. ಈಗಂತೂ ವಾಟ್ಸಾಪ್‌, ಫೇಸ್‌ಬುಕ್‌, ಟೆಲಿಗ್ರಾಮ್‌ಗಳೆಂದು ಹುಟ್ಟುಹಬ್ಬದ ಶುಭಾಶಯಗಳ ಸುರಿಮಳೆ. ಕಾಲ್‌ ಮಾಡಿ ಶುಭಾಶಯ ಹೇಳುವವರಲ್ಲೂ ಗಂಟೆಗಟ್ಟಲೆ ಮಾತನಾಡಿ ಅವರ ಆಚರಣೆಯಲ್ಲಿ ಪಾಲು ಪಡೆಯುವವರಿ¨ªಾರೆ.ಇತ್ತೀಚೆಗೆ ಕಾರ್ಪೊರೇಟ್‌ ಕಂಪೆನಿಗಳಲ್ಲಿ ಹುಟ್ಟುಹಬ್ಬದ ದಿನ ರಜೆಯ ಉಡುಗೊರೆಯೂ ಇದೆ. ಅಲ್ಲದೆ, ಕೆಲವು ಕಂಪೆನಿಗಳು ಹುಟ್ಟುಹಬ್ಬದ ದಿನ ಉಡುಗೊರೆಗಳನ್ನು ಮನೆಗೆ ಕಳುಹಿಸುತ್ತವೆ. ಗೆಳತಿಯೊಬ್ಬಳು ತನ್ನ ತಂಗಿಯ 17ನೇ ಹುಟ್ಟುಹಬ್ಬಕ್ಕೆ 17 ವಿವಿಧ ಉಡುಗೊರೆಗಳನ್ನು ನೀಡಿದ್ದಳು.
ನಿಮ್ಮ ಅಜ್ಜಿಯನ್ನೊಮ್ಮೆ ಅವರ ಹುಟ್ಟುಹಬ್ಬದ ಕುರಿತು ಕೇಳಿ ನೋಡಿ, ಅವರು, ""ನಾನು ವೈಶಾಖ ಹುಣ್ಣುಮೆಗೆ ಎರಡು ದಿನವಿರುವಾಗ ಹುಟ್ಟಿದ್ದು'' ಎಂದು ಅಚ್ಚ ಕನ್ನಡದಲ್ಲಿ ಹೇಳುತ್ತಾರೆ. ""ವಯಸ್ಸೆಷ್ಟು'' ಎಂದೇನಾದರೂ ಕೇಳಿದರೆ ಅಂದಾಜಿನಲ್ಲಿ 80-81 ಎಂದೆಲ್ಲ ಹೇಳುತ್ತಾರೆ. ಅಂದು ಅವಿಭಕ್ತ ಕುಟುಂಬಗಳಲ್ಲಿ ಹುಟ್ಟಿದ ನಮ್ಮ ಅಜ್ಜ- ಅಜ್ಜಿಯಂದಿರಿಗೆ ದಿನಾಂಕ ವರುಷಗಳನ್ನು ದಾಖಲಿಸುವ ಪದ್ಧತಿ ಇಲ್ಲದಿದ್ದರೂ ಕಾಲಮಿತಿಗಳನ್ನು, ಅಣ್ಣನಿಗಿಂತ ನಾನೆಷ್ಟು ಚಿಕ್ಕವರೆಂದು ಅಂತರವನ್ನು ಚೆನ್ನಾಗಿ ಎಣಿಸಿ ಅವರ ವಯಸ್ಸನ್ನು ಹೇಳುತ್ತಾರೆ. ಅವರ ಕಾಲದಲ್ಲಿ ಹುಟ್ಟುಹಬ್ಬವೆಂದರೆ ಸಿಹಿಮಾಡುವುದು, ಮನೆಯಲ್ಲಿ ಮಕ್ಕಳನ್ನು ಕೂರಿಸಿ ಹಿರಿಯರು ಆರತಿ ಎತ್ತಿ ಆಶೀರ್ವದಿಸುವುದು.
ಈಗ ನಾವೆಲ್ಲ ಆಧುನಿಕತೆಯ ನೆಪದಲ್ಲಿ ಆಂಗ್ಲೀಕರಣವನ್ನು ಅನುಸರಿಸಿ ದೀಪ ಉರಿಸುವ ಬದಲು, ಮೇಣದಬತ್ತಿಯನ್ನು ಆರಿಸುವುದು ಇನ್ನಿತರ ಅಭ್ಯಾಸಗಳು ನಮ್ಮ ಭಾರತೀಯ ಸಂಸ್ಕೃತಿಯನ್ನು ಮರೆಯುವಂತೆ ಮಾಡಿದೆ. ಹುಟ್ಟುಹಬ್ಬದ ದಿನ ಶುಭಾಶಯ ಕೋರುವ ಕೆಲವು ಗೆಳೆಯ/ಗೆಳತಿಯರು/ಸಂಬಂಧಿಕರು ಇನ್ನು ನಮ್ಮನ್ನು ಸಂಪರ್ಕಿಸುವುದು ಮುಂದಿನ ವರ್ಷ, ಇನ್ನು ಕೆಲವರು  ವಾಟ್ಸಾಪ್‌, ಫೇಸ್‌ಬುಕ್‌ನಲ್ಲಿ ಶುಭ ಕೋರಿ, ಎದುರಿಗೆ ದೊರೆತಾಗ ಪರಿಚಯವೇ ಇಲ್ಲದಂತಿರುತ್ತಾರೆ. ಎಲ್ಲರ ನೆಚ್ಚಿನ ವಾಟ್ಸಾಪ್‌ನಲ್ಲಿ ಹುಟ್ಟುಹಬ್ಬದ ಆಚರಣೆ ಮಾಡುತ್ತ ಕಾಲೇಜು ಹುಡುಗರು ಕೇಕಿನಿಂದ ಹೊಡೆದಾಡಿಕೊಂಡು ಹೊರಡುವಾಗ ಆ ಕೇಕನ್ನು ತಿನ್ನಲು ಭಿಕ್ಷುಕನೊಬ್ಬ ಬರುವ ವಿಡಿಯೋ ಚಿತ್ರಣವನ್ನು ಕಂಡಿರಬಹುದು. ಹಿತಮಿತವಾಗಿ ಆಚರಣೆ ಮಾಡಿ  ಉಳಿದ ತಿನಿಸುಗಳನ್ನು ಹಸಿದವರಿಗೆ ನೀಡಿದರೆ ಅವರ ಹಾರೈಕೆಯೇ ನಮಗೆ ಶ್ರೇಯೋಭಿಲಾಷೆ.
ಹುಟ್ಟುಹಬ್ಬ ಬಂದಿತೆಂದರೆ ನಾವು ಇನ್ನಷ್ಟು ಪ್ರೌಢರಾದಂತೆ, ಪ್ರತಿ ಹುಟ್ಟುಹಬ್ಬಕ್ಕೂ ಏನಾದರೂ ಸಾಧನೆಯ ಪಣತೊಟ್ಟು, ಆ ಪಣವನ್ನು ಸಾಧಿಸುವತ್ತ ಶ್ರಮವಹಿಸಿದರೆ, ಖಂಡಿತ ಜೀವನದಲ್ಲಿ ಉನ್ನತಿಯನ್ನು ಪಡೆಯುತ್ತೇವೆ. ಪ್ರತಿ ಹುಟ್ಟುಹಬ್ಬಕ್ಕಾಗಿ, ಇನ್ನಷ್ಟು ಉನ್ನತಿಗಾಗಿ ಕಾಯುತ್ತಾ ಉತ್ತಮ ನಾಗರಿಕರಾಗೋಣ. ಯುಗಾದಿ ಕಳೆದರೂ ಯುಗಾದಿ ಮರಳಿ ಬರುವುದು ಎಂಬಂತೆ ಹುಟ್ಟುಹಬ್ಬ ಮರಳಿ ಮರಳಿ ಬಂದು ಹೊಸತು ಹೊಸತು ತರುವುದು ಎಂಬುದೇ ಆಶಯ.
                         (ಉದಯವಾಣಿಯ ಯುವ ಸಂಪದ ದಲ್ಲಿ ಪ್ರಕಟಿತ )
https://www.udayavani.com/kannada/news/youth-supplement/242035/happy-birthday-too-u

ಸೈಕಲ್‌ ಕತೆ


ಅಪ್ಪಾ , ನಾನು ದೊಡ್ಡವನಾದ ಮೇಲೆ, ಸೈಕಲ್‌ ರಿಪೇರಿ ಅಂಗಡಿ ಇಡ್ತೀನಿ' ಈ ವಾಣಿಜ್ಯವಾರ್ತೆಯನ್ನು ಈ ಸದ್ಯ ನೀವು ದೂರದರ್ಶನದಲ್ಲಿ ನೋಡಿರುತ್ತೀರಿ. ಎಲ್ಲರೂ ಇಂಜಿನಿಯರಿಂಗ್‌, ಡಾಕ್ಟರ್‌ ಓದುತ್ತೀನಿ ಅನ್ನುವ ಕಾಲದಲ್ಲಿ  ಮಗನ್ಯಾಕೆ ಅಪ್ಪನಿಗೆ ಹಾಗೇ ಹೇಳುತ್ತಾನೆ ಎಂದು ನೀವು ಯೋಚಿಸಬಹುದು. ಏಕೆಂದು ನಾನೂ ಯೋಚಿಸುತ್ತಿದ್ದೇನೆ.
ನನ್ನ ಮೊದಲ ಹುಟ್ಟುಹಬ್ಬಕ್ಕೆ ಕೇಸರಿ ಬಣ್ಣದ ಮೂರು ಚಕ್ರದ ಸೈಕಲ್‌ ಒಂದನ್ನು ನನ್ನ ಮಾಮ ಉಡುಗೊರೆಯಾಗಿ ನೀಡಿದ್ದನು. ಅದನ್ನು ನಾನು, ನನ್ನ ತಮ್ಮ ಕಿತ್ತಾಡಿಕೊಂಡು ಓಡಿಸುತ್ತಿದ್ದೆವು. ಇನ್ನು 5-6ನೇ ತರಗತಿಗೆ ಹೋಗುತ್ತಲೇ, ಬೇಸಿಗೆ ರಜೆಯಲ್ಲಿ ನನಗೆ ಸೈಕಲ್‌ ಕಲಿಸಲೆಂದು ನನ್ನ ಅಪ್ಪ ಬಾಡಿಗೆ ಸೈಕಲ್‌ ತಂದಿದ್ದರು. ಅವರ ಬಿಡುವಿನ ವೇಳೆಯಲ್ಲಿ ನನಗೆ ಮನೆಯ ಪಕ್ಕದ ಆಟದ ಮೈದಾನದಲ್ಲಿ ಕಲಿಸುತ್ತಿದ್ದರು. ಆದರೆ, ನನ್ನ ತಮ್ಮ ಸೈಕಲ್‌ ಓಡಿಸಲು ಕಲಿತನು. ಆಮೇಲೆ ನನ್ನ ತಮ್ಮನೇ ನನ್ನ ಗುರು!


ಸೈಕಲ್‌ ಕಲಿತ ಮೇಲೆ ಶಾಲೆಗೆ ಹೋಗಲು ನನಗೆ ಸಂಬಂಧಿಕರ ಸೈಕಲ್‌ ದೊರೆಯಿತು, ತಮ್ಮನಿಗೆ ಚಿಕ್ಕಪ್ಪ ಬೈಕು ಕೊಂಡರೆಂದು ಉಪಯೋಗಿಸದೇ ಇಟ್ಟ ಹೊಸ ಸೈಕಲ್‌ ಸೈಕಲ್‌ನಲ್ಲಿ ಹೋಗುತ್ತಿದ್ದೇವೆಂಬ ಮಹಾ ಅಭಿಮಾನ ನಮಗೆ. ಅವನ ಸೈಕಲನ್ನು ತೊಳೆದು, ನನ್ನ ಸೈಕಲನ್ನು ತೊಳೆಯಲು ಸಹಾಯ ಮಾಡುತ್ತಿದ್ದನು ನನ್ನ ತಮ್ಮ. ಇಷ್ಟರಲ್ಲಿ ಒಂದು ದಿನ ಶಾಲೆಯಲ್ಲಿ ನನ್ನ ತಮ್ಮನ ಸೈಕಲ್‌ ಕಳೆದು ಹೋಯಿತು, ಎರಡು ದಿನ ಅದರದೇ ಕನಸು. ನಂತರದ ದಿನಗಳಲ್ಲಿ ಇಬ್ಬರೂ ಸೇರಿ ಡಬ್ಬಲ್‌ ರೈಡ್‌ ಶುರು ಹಚ್ಚಿಕೊಂಡೆವು.5ನೇ ವರ್ಷದ ಹುಟ್ಟುಹಬ್ಬದ ದಿನ ನನ್ನ ಮಾಮ ಅವನ ಸೈಕಲ್ಲಿನ ಎದುರುಗಡೆ ಕೂರಿಸಿಕೊಂಡು ದೇವಸ್ಥಾನಕ್ಕೆ ಹೋದದ್ದು ಇನ್ನೂ ನೆನಪಿದೆ. ವಾಪಸ್‌ ಬರುವುದನ್ನು ಕಂಡ ಅವನ ಮಗಳು ಅವಳ ಹಕ್ಕಿನ ಸೀಟಿನಲ್ಲಿ ನಾನು ಕುಳಿತೆನೆಂದು ಹಠ ಮಾಡಿ ಮಾಮನ ಜೊತೆ ದೇವಸ್ಥಾನಕ್ಕೆ ಹೋಗಿ ಬಂದಿದ್ದಳು.
ನಮ್ಮ ಪಕ್ಕದ ಮನೆಯ ಅಂಕಲ್‌ ಒಳ್ಳೆಯ ಉದ್ಯೋಗದಲ್ಲಿದ್ದವರು, ರಿಟೈರ್‌ ಆಗುವವರೆಗೂ ಸೈಕಲ್ಲಿನಲ್ಲೇ ಕಚೇರಿಗೆ ಹೋಗುತ್ತಿದ್ದರು. ಅದೇ ಇರಬೇಕು ಅವರ ಆರೋಗ್ಯದ ಸೀಕ್ರೆಟ್‌. ಈಗ 70 ವಯಸ್ಸಾದರೂ ಗಟ್ಟಿಮುಟ್ಟಾಗಿದ್ದಾರೆ.
ಇತ್ತೀಚೆಗೆ ಸಾಫ್ಟ್ವೇರ್‌ ಕಚೇರಿಗಳಲ್ಲೂ ಸೈಕಲಿನದೇ ಹವಾ. ಬೈಕು, ಕಾರಿನಲ್ಲಿ ಮೂರು ತಾಸು ಮುಂಚೆ ಹೊರಟು ಟ್ರಾಫಿಕ್‌ನಲ್ಲಿ ಸಿಲುಕುವ ಬದಲು, ಸೈಕಲ್‌ನಲ್ಲಿ ಒಂದು ತಾಸಿನಲ್ಲಿ ತಲುಪಬಹುದೆಂದು ನನ್ನ ಸಹೋದ್ಯೋಗಿಯ ಅನಿಸಿಕೆ. ಮತ್ತೂಬ್ಬ ಬೆಳಿಗ್ಗೆ ಬೇಗ ಬಂದು ಜಿಮ್ಮಿಗೆ ಹೋಗುತ್ತಿದ್ದವನು, ಈ ಒಂದು ತಿಂಗಳಿಂದ ಸೈಕಲಿನ ಮೊರೆ  ಹೋಗಿದ್ದಾನೆ. ವಿಶ್ವೇಶ್ವರಯ್ಯ ಸಂಗ್ರಹಾಲಯದಲ್ಲಿ ಸೈಕಲನ್ನು ತುಳಿದು ಬಾಲನ್ನು ರಿಂಗ್‌ನಲ್ಲಿ ಹಾಕುವ ಆಟವನ್ನು ಆಡಿದ ನೆನಪು. ಸೈಕಲ್‌ ಓಡಿಸುವ ಸ್ಪರ್ಧೆ, ಸ್ಲೋ ಸೈಕ್ಲಿಂಗ್‌ ಮುಂತಾದ ಸ್ಪರ್ಧೆಗಳು ಕ್ರೀಡಾ ಜಗತ್ತಿನಲ್ಲಿ ಶುರುವಾಗಿವೆ. ಸೈಕಲ್‌ ಮೇಲೆ ವಿವಿಧ ಸಾಹಸಗಳನ್ನು ಸರ್ಕಸ್ಸಿನಲ್ಲಿ ಕಾಣಬಹುದು.

ಕೆಲವು ಪ್ರದೇಶಗಳಲ್ಲಿ ಬೇರೆ ವಾಹನ ಸೌಲಭ್ಯ ಒಲ್ಲದಿರುವ ಕಡೆಗಳಲ್ಲಿ  ಸೈಕಲ್‌ ಒಂದೇ ದಾರಿ. ಜೈಪುರದಲ್ಲಿ ಸೈಕಲ್‌ಗಾಡಿಯಲ್ಲಿ  ನಮ್ಮ ನಾಲ್ಕು ಜನರನ್ನು ತಿರುಗಾಡಿಸಿದ್ದು -ಅವನು ಸೈಕಲ್‌ ಮ್ಯಾನ್‌ ಇರಬೇಕು.

cycle rikshaw ಗೆ ಚಿತ್ರದ ಫಲಿತಾಂಶ
ಪೆಟ್ರೋಲ್‌ ಡಿಸೇಲ್‌ ಈ ಜಗದಲ್ಲಿ ಕಡಿಮೆಯಾಗಿ, ಬೆಲೆ ಜಾಸ್ತಿಯಾಗಿರುವ ಕಾಲದಲ್ಲಿ ಹಿತಮಿತವಾಗಿ ಕಾರು, ಬೈಕು ಓಡಿಸಿ, ಸೈಕಲ್‌ ಬಳಸಿದರೆ ನಮ್ಮ ಮುಂದಿನ ಪೀಳಿಗೆಯು ನಮ್ಮಂತೆ ಏನಾದರೂ ಸಾಧಿಸಬಹುದು, ಇಲ್ಲವಾದರೆ ಪೆಟ್ರೋಲ್‌ ಪಂಪಿನ ಜಾಗದಲ್ಲಿ ನಮ್ಮ ಮಕ್ಕಳು ಸೈಕಲ್‌ ಅಂಗಡಿ ತೆಗೆಯಬೇಕಾಗಬಹುದು !

(ಉದಯವಾಣಿಯ ಯುವ ಸಂಪದದಲ್ಲಿ ಆಗಸ್ಟ್ ೨೫ರಂದು ಪ್ರಕಟಿತ )

https://www.udayavani.com/kannada/news/youth-supplement/232270/cycle-story

ಅಮ್ಮಂದಿರಿಗೊಂದು ದಿನವಿದೆ; ಅತ್ತೆಯಂದಿರಿಗೊಂದು ದಿನವಿರಲಿ !


ಅಮ್ಮಂದಿರ ದಿನ,ಅಪ್ಪಂದಿರ ದಿನ,ಅಣ್ಣ-ತಂಗಿಯರ ದಿನ,ಶಿಕ್ಷಕರ ದಿನ ಹೀಗೆ ದಿನಾಚರಣೆಗಳಿಗೆ ಸೇರ್ಪಡೆಯಾಗಬೇಕಾಗಿರುವುದು‌ ಅತ್ತೆಯಂದಿರ ದಿನಾಚರಣೆ.ನಿಘಂಟು ತೆಗೆದು ನೋಡಿದರೆ,ಅಪ್ಪನ ಸೋದರಿ ನಮಗೆ ಅತ್ತೆ,ಅಮ್ಮನ ಅತ್ತಿಗೆ ಸೋದರ ಅತ್ತೆ,ಗಂಡನ‌ ಅಮ್ಮಸೊಸೆಗೆ ಅತ್ತೆ, ಹೆಂಡತಿಯ ತಾಯಿ ಗಂಡನಿಗೆ ಅತ್ತೆ.ಆಂಗ್ಲರ ಆಂಟಿ ಬರುವ ಮೊದಲು ದೂರದ ಸಂಬಂಧಿಗಳನ್ನು ಅತ್ತೆಯೆಂದೇ ಸಂಭೋದಿಸುವ ರೂಢಿಯಿತ್ತು. ಚಿಕ್ಕಂದಿನಲ್ಲಿ ಇನ್ನೂ ಮದುವೆಯಾಗಲಿರುವ ಅತ್ತೆ ಮನೆಯಲ್ಲಿದ್ದರಂತೂ ಸದಾ ಅಡಿಗೆ-ಮನೆಗೆಲಸದಲ್ಲಿ ತೊಡಗಿರುವ ಅಮ್ಮನಿಗಿಂತ ಅತ್ತೆಯೇ ನಮಗೆ ತುಂಬ ಹತ್ತಿರ.ತುಂಟತನ ಮಾಡಿ ಅಮ್ಮನ ಬಳಿ‌ ಬೈಸಿಕೊಂಡು ಅತ್ತಾಗ ಸಮಾಧಾನ ಮಾಡಲು,ಚಾಕಲೇಟು ಬೇಕೆಂದು ಹಠ ಮಾಡಿದಾಗ ಅಮ್ಮನ ನಕಾರಗಳಿಂದ ತಪ್ಪಿಸಿ ಕೊಡಿಸಲು,ಎಣ್ಣೆ ಹಚ್ಷಿ ತಲೆಬಾಚಿಕೊಟ್ಟು, ಶಾಲೆಗೆ ತಡವಾಗಲು ತನ್ನ ಸ್ಕೂಟಿಯಲ್ಲಿ ಬಿಟ್ಟುಬರಲು ನಮಗೆ ಅತ್ತೆಯೇ ಬೇಕು.ಶಾಲೆಗಳಲ್ಲಿ ಕಷ್ಟವಾದ ಪಾಠಗಳನ್ನು ಮನೆಯಲ್ಲಿ ತಿಳಿಸಿ ಹೇಳುವುದರಲ್ಲೂ ಅತ್ತೆ ಎತ್ತಿದ ಕೈ.ಇನ್ನೂ ಅವಳ ಮದುವೆಯ ದಿನ‌ ಎಲ್ಲ ಮಕ್ಕಳೊಂದಿಗೆ ಆಟವಾಡಿ ,ಅವಳೊಂದಿಗೆ ನಾನು ಹೋಗುತ್ತೇನೆ ಎಂದು ಹಠಮಾಡಿದ್ದು ಇಂದಿಗೂ ನೆನಪಿದೆ.
  ಇನ್ನು ರಜಾ ದಿನಗಳಲ್ಲಿ ಅಮ್ಮನ ತವರಿಗೆ ಹೋಗಲು,ಬಗೆಬಗೆಯ ತಿಂಡಿತಿನಿಸು ಮಾಡಿಕೊಟ್ಟು,ಪೇಟೆಗೆ ಕೊಂಡೊಯ್ದು ಬಣ್ಣಬಣ್ಣದ ಬಟ್ಟೆ ಕೊಡಿಸಿ,ಐಸ್-ಕ್ರೀಮ್,ಮಿಠಾಯಿ ಕೊಡಿಸುವುದು ಖಚಿತ.ಮಾಮನ ಮಗ ತನ್ನ ಬ್ಯಾಟಿಂಗ್ ಮುಗಿಸಿ ತನಗೆ ನಿದ್ರೆ ಬರುತಿದೆಯೆಂದು ಓಡಲು ಅತ್ತೆ ತನ್ನ ಮಧ್ಯಾಹ್ನದ ನಿದ್ರೆಗೆ ಪೂರ್ಣ ವಿರಾಮವನ್ನಿತ್ತು,ನನ್ನೊಂದಿಗೆ ಆಡುತ್ತಿದ್ದಳು.ದೇವಸ್ಥಾನಗಳಿಗೆ,ವಿಶೇಷ ಕಾರ್ಯಕ್ರಮಗಳಿಗೆ ಹೋಗುವಾಗ ನನ್ನನ್ನು ಸಿದ್ದಗೊಳಿಸುವ ಜವಾಬ್ದಾರಿ ಅವಳೇ ವಹಿಸಿಕೊಳ್ಳುತ್ತಿದ್ದಳು.ನನಗೆ ಮಲ್ಲಿಗೆ ಹೂವು ಇಷ್ಟವೆಂದು ಮಾಮನ‌ ಬಳಿ ಜಾಸ್ತಿ ಹೂವನ್ನು ತರಲು ಹೇಳುತ್ತಿದ್ದಳು.ಈಗಿನ ಕಾಲೇಜು, ಕಛೇರಿ ಕೆಲಸದ ನಡುವೆ ಎಲ್ಲಿಯ  ಬೇಸಿಗೆರಜೆ.ರಜೆಯ
 ಇಲ್ಲ,ಅತ್ತೆ ಮನೆಯ ಭೇಟಿಯೂ ಇಲ್ಲ.
 ಮದುವೆಯ ನಂತರ ಸಿಕ್ಕ ಇನ್ನೋರ್ವ ಅಮ್ಮ ಅತ್ತೆ.ಮುಂಜಾನೆ ಎದ್ದು ಅಡಿಗೆ ಮಾಡಿ ಕಛೇರಿಗೆ ಹೋಗುವಾಗ ಡಬ್ಬಿಯ ನೀಡಿ,ವಾರಕ್ಕೊಮ್ಮೆ ಸಿನಿಮಾ,ಸುತ್ತಾಟವೆಂದು ನಮ್ಮನ್ನು ಕಳುಹಿಸಿ,ತನ್ನ ಪ್ರೀತಿ ಆದರಗಳಿಂದ ತವರಿನ‌ ನೆನಪು ಕಾಡದಂತೆ ಮಾಡುವ ಮಹಾನ್ ಶಕ್ತಿ ಅವಳು.ನಾನು ಕಾರು ಓಡಿಸಲು ಕಲಿಯಲು ಅವಳೇ ಕಲಿತಷ್ಟು ಉತ್ಸಾಹ.ಪಾರ್ಲರು,ಜಿಮ್ಮುಗಳಿಗೆ ಹೋಗಿಬಾಮ್ಮ ಎಂದು ಕಳುಹಿಸಿ,ದೀಪಾವಳಿ ಹಬ್ಬದ ದಿನಗಳಲ್ಲಿ ಮಗನೊಂದಿಗೆ ನನಗೂ ಎಣ್ಣೆ- ಸ್ನಾನ.ಇನ್ನು ಮನೆಗೆ ಮಗು ಬರುವ ಸಿಹಿ ಸುದ್ದಿ ಕೇಳಿ ಒಂದು ದಿನವೂ ತಪ್ಪಿಸದೇ ಎಳನೀರು ತಂದುನೀಡಿ,ಬಾದಾಮಿ,ಕೇಸರಿಯನ್ನೆಲ್ಲ ಹಾಲಲ್ಲಿ ನೆನೆಸಿಕೊಡುತ್ತಿದ್ದಳು.ಮಗ ಹುಟ್ಟಿದ ಕ್ಷಣದಿಂದ ಹಾಲುಣಿಸಲಷ್ಟೇ ಅವನು ನನ್ನ  ಬಳಿ ಬರುತ್ತಿದ್ದುದು,ಉಳಿದ ಸಮಯವೆಲ್ಲ ತನ್ನಜ್ಜಿಯ ಮಡಿಲಲ್ಲೇ.ಆರು ತಿಂಗಳ ಹೆರಿಗೆ ರಜೆ ಮುಗಿಸಿ,ಕೆಲಸಕ್ಕೆ ಸೇರಲು ಅವಳ ಸಹಕಾರದಿಂದಲೇ ಸಾಧ್ಯವಾಯಿತು.
  ಕೆಲವು ಮನೆಗಳಲ್ಲಿ ಮಗುವಿಗೆ ಅತ್ತೆಯೇ ನಾಮಕರಣ ಮಾಡುವ,ತೊಟ್ಟಿಲು ಶಾಸ್ತ್ರ ಮಾಡುವ ಸಂಪ್ರದಾಯವಿದೆ.ಇನ್ನು ಕೆಲವು ಕಡೆ ಮದುವೆಯ ಶುಭ ಸಂದರ್ಭದಲ್ಲಿ ಮದುಮಗಳನ್ನು ಮಂಟಪಕ್ಕೆ ಕರೆತರುವ ಜವಾಬ್ದಾರಿಯು ಸೋದರ ಮಾವ-ಅತ್ತೆಯದೇ.'ಅತ್ತಿ ಅತ್ತಿ ನಮ್ಮತ್ತಿ ನನ್ನ ದಡ್ಡ ಅಂತಾರೆ' ಎಂಬ  ಜನಪದ ಹಾಡಿಗೆ ನನ್ನ ತಮ್ಮ ಮತ್ತು ಅವನ ಗೆಳತಿ ಶಾಲೆಯ ವಾರ್ಷಿಕೋತ್ಸವಕ್ಕೆ ನೃತ್ಯ ಮಾಡಿ,ಮೊನ್ನೆ ಮೊನ್ನೆ ಅವನ ಗೆಳೆಯರೆಲ್ಲ ಅವಳನ್ನು ಅತ್ತೆಯೆಂದು ಕಾಡಿಸುತ್ತಿದ್ದರು.ಆ ಹಾಡಿನಲ್ಲಿ ಅಳಿಯನಾದವನು ಬಹು ದಡ್ಡನಾಗಿದ್ದು ಅತ್ತೆ ಕೇಳಿದಕ್ಕೆಲ್ಲ ಹುಚ್ಚು ಹುಚ್ಚಾಗಿ ಉತ್ತರ ನೀಡಿ ತನ್ನ ದಡ್ಡತನ ತೋರಿಸುತ್ತಾನೆ.ಈಗ  ಅವಳನ್ನು ಹಾಗೇ ಕಾಡಿದರೆ ಈ ಸದ್ಯ ಮದುವೆಯಾಗಿರುವ ಅವಳ ಗಂಡ ನಮ್ಮನ್ನು ಓಡಿಸಿಕೊಂಡು ಬಂದಾನು.
 'ಮದುವೆಗೂ ಮೊದಲು ಹುಡುಗ- ಹುಡುಗಿಯ ಜಾತಕ ಕೂಡಿಸುವುದರೊಂದಿಗೆ,ಅತ್ತೆ- ಸೊಸೆಯ ಜಾತಕವೂ ಕೂಡಬೇಕು' ಎಂದು ಈ ಸದ್ಯ ಪತ್ರಿಕೆಯಲ್ಲಿ ಓದಿದ ನೆನಪು.ಆ ಮಾತು ಎಷ್ಟು ಸತ್ಯ.ಬರೀ ಗಂಡ-ಹೆಂಡತಿ ಅನ್ಯೋನ್ಯವಾಗಿದ್ದರೆ ಸಾಲದೂ ಅತ್ತೆ-ಸೊಸೆಯ ನಡುವೆಯೂ ಅನ್ಯೋನ್ಯತೆಯಿದ್ದರೆ ಆ ಕುಟುಂಬದಷ್ಟು ಸುಖಿ ಕುಟುಂಬ ಇನ್ನಿಲ್ಲ.ಈ ಸದ್ಯ ಬಿಡುಗಡೆಯಾದ 'ಬಾಹುಬಲಿ'ಯನ್ನೇ ತೆಗೆದುಕೊಂಡರೆ ಹೆಂಡತಿ ಪ್ರೀತಿಗಾಗಿ ಅಮ್ಮನ ಪ್ರೀತಿಯನ್ನು ಕಳೆದುಕೊಳ್ಳಬೇಕಾಗುತ್ತದೆ.'ಅತ್ತೆ-ಸೊಸೆ ಜಗಳದಲ್ಲಿ ಮಗ ಬಡವಾದನು' ಎಂಬಂತಾಗುತ್ತದೆ.ಇನ್ನು ಕೆಲವರ ಬಾಯಲ್ಲಿ 'ಮುತ್ತು ಕೊಡುವಳು ಬಂದ ಮೇಲೆ ತುತ್ತು ಕೊಡುವವಳು ಬೇಡವಾದಳು' ಎಂಬ ಮೂದಲಿಕೆ ಬೇರೆ.ಅನ್ಯೋನ್ಯತೆಯೆಂದರೆ ಸ್ವಲ್ಪವೂ ಮನಸ್ತಾಪ,ಜಗಳವಿರಬಾರದೆಂದೆನಿಲ್ಲ,ಈ ಹಿಂದೆ ಹಿರಿಯರ ಬಾಯಲ್ಲಿ ಕೇಳಿದಂತೆ,' ಸಾವಿರ ಜನಿವಾರ ಗಂಟು ಹಾಕಬಹುದು,ಎರಡು ಜಡೆ ಗಂಟು ಹಾಕಲು ಸಾಧ್ಯವಿಲ್ಲ', ಮಾತುಕತೆ,ಮನಸ್ತಾಪಗಳು ಇದ್ದದ್ದೇ.' ಗಂಡ ಹೆಂಡರ ಜಗಳ ಉಂಡು ಮಲಗುವ ತನಕ ಅನ್ನುವಂತೆ,ಅತ್ತೆ-ಸೊಸೆಯ ಜಗಳ ಮಗನು ಬರುವ ತನಕವೆಂದಿದ್ದರೆ,ಎಲ್ಲ ಮರೆತು ಸುಧಾರಿಸಿಕೊಂಡಿದ್ದರೆ ಆದರ್ಶ ಅತ್ತೆ-ಸೊಸೆಯಾಗುವುದರಲ್ಲಿ ಸಂಶಯವಿಲ್ಲ.
 ಅತ್ತೆ-ಸೊಸೆಯ ಮಧುರ ಬಾಂಧವ್ಯವನ್ನು ಕಥೆಯಾಗಿಸಿ ಹತ್ತಾರು ಧಾರಾವಾಹಿಗಳು ದೂರದರ್ಶನದಲ್ಲಿ ಮೂಡಿಬಂದಿದ್ದು,ಹಿಂದಿಯ ' ಕ್ಯೂಂಕಿ ಸಾಸ್ ಭೀ ಕಭೀ ಬಹು ಥೀ' ಎರಡು ಸಾವಿರದಷ್ಟು ಎಪಿಸೋಡ್ ಓಡಿದ್ದು ವಿಶೇಷ.ಅತ್ತೆ- ಸೊಸೆಯ ಬಾಂಧವ್ಯವೇ ಅಂತದ್ದು.ಆ ಧಾರವಾಹಿಯ ಅಂಕಿತದಂತೆ ಅತ್ತೆಯು ತಾನು ಒಂದು ಕಾಲದಲ್ಲಿ ಸೊಸೆಯಾಗಿದ್ದೆ ಎಂದು ನೆನಪಿಟ್ಟುಕೊಂಡು,ಸೊಸೆಯು ತನ್ನ ಅತ್ತೆಯು ಹಿಂದೆ ಸೊಸೆಯಾಗಿ ಪಡೆದ ಅನುಭವದಿಂದ ನನಗೆ ಹಿತವಚನಗಳನ್ನು ಹೇಳುತ್ತಾರೆ ಎಂದೆಣಿಸಿ ಗೌರವ ನೀಡಿದರೆ ಅಂತಹ ಬಾಂಧವ್ಯ ಇನ್ನೊಂದಿಲ್ಲ.




   ಇಂದು ಕಛೇರಿಯಲ್ಲೊಬ್ಬಳು " ನಮ್ಮತ್ತೆ ಒಂದು ದಿನವೂ ನಮಗೆ ತಂಗಳು ತಿನ್ನಲು ನೀಡಿಲ್ಲ,ಪಾಪ ಅವರೇ ತಿನ್ನುತ್ತಾರೆ." ಎಂದಳು.ಎರಡು ಮಕ್ಕಳನ್ನು ಪಡೆದಿರುವ ಅವಳ ಇಬ್ಬರೂ ಮಕ್ಕಳನ್ನು ಸ್ಕೂಲಿಗೆ ಕಳುಹಿಸುವ,ಅವರಿಗಾಗಿ ಊಟ ತಿಂಡಿ,ಹೋಮ್ ವರ್ಕ್ ಮಾಡಿಸುವ ಎಲ್ಲಾ ಜವಾಬ್ದಾರಿಯನ್ನು ಅತ್ತೆಯೇ ಪಡೆದಿದ್ದರೆ,ಇವಳು ಅತ್ತೆಗೆ ಆದಷ್ಟು ಮನೆಕೆಲಸದಲ್ಲಿ ಸಹಾಯ ಮಾಡಿ ಕಛೇರಿಗೆ ಬರುತ್ತಾಳೆ.
  ಮಗನನ್ನು ಕಳೆದುಕೊಂಡ ಕೆಲವು ತಾಯಂದಿರು ತಮ್ಮ ಸೊಸೆಯನ್ನು ಸ್ವಂತ ಮಗಳಂತೆಣಿಸಿ,ಅವಳನ್ನು ಒಪ್ಪಿಸಿ ಇನ್ನೊಂದು ಮದುವೆ ಮಾಡಿಸಿದ ಉದಾಹರಣೆಗಳಿವೆ.ಮಗ ಕೆಟ್ಟವನೆಂದು ತಿಳಿದು ಸೊಸೆಯನ್ನು ರಕ್ಷಿಸಿ ಅವಳಿಗೊಂದು ಬಾಳು ಒದಗಿಸುವ ಸ್ಥೈರ್ಯ ಹೊಂದಿರುವ ತಾಯಂದಿರು ಈ ಜಗದಲ್ಲಿದ್ದಾರೆ.ಗಂಡ-ಹೆಂಡತಿಯ ವಿಚ್ಛೇದನವಾಗಿದ್ದರೂ ಅತ್ತೆ-ಸೊಸೆಯ ಸಂಬಂಧ ತಾಯಿ-ಮಗಳಂತಿರುವ ಉದಾಹರಣೆಯೂ ಇದೆಯೆನ್ನೋಣ.
   ಮಗಳನ್ನು ಹೆತ್ತವಳು ಅಳಿಯನಿಗೆ ಧಾರೆಯೆರದು,ಅತ್ತು ಅತ್ತೆಯಾಗುತ್ತಾಳೆ.ಮಗನನ್ನು ಹೆತ್ತರೆ ಸಾಲದು,ಮಗನಿಗೆ ಉತ್ತಮ ತಾಯಿಯೂ ಆಗಬೇಕು,ಸೊಸೆಯನ್ನು ಪಡೆದು ಮಗದೊಮ್ಮೆ ಅತ್ತೆಯ ರೂಪಿನ ಅಮ್ಮನಾಗಬೇಕು.ಆಗಲೇ ಅವಳ ಜನ್ಮ ಸಾರ್ಥಕವಾಗುವುದು.
 ಈ ಸದ್ಯ  ಚಲನಚಿತ್ರ ಹಿರಿಯ ನಟಿಯೋರ್ವಳು,"ನನ್ನ ಸೊಸೆ ನನಗೆ ಸಿಕ್ಕ‌ ಇನ್ನೋರ್ವ ಮಗಳು,ನಮಗಾಗಿ ತನ್ನ ಹೆತ್ತವರನ್ನು ಬಿಟ್ಟು ಬಂದಿದ್ದಾಳೆ,ನನ್ನ ಮಗನ‌ ಮೇಲೆ ಅವಳಿಗೆ ಜಾಸ್ತಿ ಅಧಿಕಾರವಿರುವುದು" ಎಂಬ ಸಂದೇಶ ಜಾಲತಾಣಗಳಲ್ಲಿ ನೀಡಿದ್ದರು.ಮದುವೆಯವರೆಗೂ ಒಂದು ಮನೆಯ ಮಗಳಾಗಿದ್ದವಳು,ಮದುವೆಯ ನಂತರ ಇನ್ನೊಂದು ಮನೆಮಗಳು ಅವಳು.ಇವರೆಗೂ ತವರಿನ ಆಚಾರ,ಊಟೋಪಚಾರವೇ ಬೇರೆ,ಗಂಡನ ಮನೆಯ ಆಚಾರವೇ ಬೇರೆ,ಎಲ್ಲ ಅರಿತುಕೊಂಡು ಬದಲಾಗಲು ಸೊಸೆಗೆ ಸಾಕಷ್ಟು ಸಮಯವೇ ಬೇಕು.ಆ ಅವಕಾಶ ನೀಡಿ ಸೊಸೆ ತನ್ನ ಮಗನನ್ನು ನನ್ನಿಂದ ಕಿತ್ತುಕೊಳ್ಳಲು ಮನೆಗೆ ಬಂದ ಮಾರಿ ಎಂದುಕೊಳ್ಳದೇ,ಸೊಸೆಯನ್ನು ತನ್ನ ಮಗಳಾಗಿ ನೋಡಿಕೊಂಡರೆ ಅತ್ತೆಗೆ ಅಮ್ಮನಾಗುವ ಅವಕಾಶ.ಆ ಶಕ್ತಿ ಅವಳಲ್ಲಿದೆ.
ಈ ಸದ್ಯ ನಾನೂ ಅತ್ತೆಯಾಗಿದ್ದೇನೆ.ನಾದಿನಿಗೆ ಮಗ ಹುಟ್ಟಿದ್ದಾನೆ.ನಾನು ಉತ್ತಮ ಅತ್ತೆಯಾಗಬೇಕಿದೆ.

                                 (ಉದಯವಾಣಿಯ ಮಹಿಳಾ ಸಂಪದದಲ್ಲಿ ಪ್ರಕಟಿತ )

https://www.udayavani.com/kannada/news/womens-supplement/229232/there-is-a-day-for-moms-be-it-a-day

Tuesday, November 13, 2018

ಪ್ರಿಯತಮ ಕರುಣೆಯ ತೋರೆಯ!

ಹಸಿರು ಜರತಾರಿ ಸೀರೆ,ರವಿಕೆ,ಹಸಿರು ಗಾಜಿನ‌ ಬಳೆಗಳನ್ನು ಧರಿಸಿ ಪಚ್ಚೆ ಹಾರ,ಕಿವಿಯೋಲೆಯ ಹಾಕಿಕೊಂಡು ಗೆಳತಿ ಗಾನಕೋಗಿಲೆಯ ಬಳಿ ಸಂದೇಶ ಕಳಿಸಿಹಳು 'ಪ್ರಿಯತಮ ಕರುಣೆಯ ತೋರೆಯ..'.
  ಚೈತ್ರಳ ಪಾರ್ಲರಿನಲ್ಲಿ ಸಕಲ ಸೌಂದರ್ಯವರ್ಧಕ ಧಾರಣೆ ನಡೆದಿದೆ.ಹುಬ್ಬು ತೀಡಿದಷ್ಟು ಸಮಾಧಾನವಿಲ್ಲ ಅವಳಿಗೆ. ವಿಶೇಷ ಪಪ್ಪಾಯ,ಅರಿಸಿಣ,ಲೋಳೆಸರ,ಮುಲ್ತಾನಿ ಮಿಟ್ಟಿ ಪ್ಯಾಕಗಳನ್ನು ಹಾಕಿ ಮಾಲಿಷ್ ಮಾಡಿ ಮುಖವೆಲ್ಲ ಪಳಪಳ ಹೊಳೆಯುತ್ತಿದೆ.ಅವಳಿಗೇನು ಕಡಿಮೆ ಅವಳದೇ ಎಕರೆಗಟ್ಟಲೆ ತೋಟ.ಇನ್ನೂ ಬಿಡದೇ ಎಳನೀರು, ಜೇನು,ಕೆನೆ,ಎಣ್ಣೆಯ ಮಾಲಿಷ್ ಮಾಡಿ ಮೈಯೆಲ್ಲ ಚೈತನ್ಯಯುತವಾಯಿತು.ಮೆನಿಕ್ಯೂರ್,ಪೆಡಿಕ್ಯೂರ್ ಮಾಡಿ ಕೈಕಾಲುಗಳು ಲಕಲಕನೆ ಹೊಳೆಯುತ್ತಿವೆ. ಬಿಟರೂಟ್,ತಾಜಾ ಚಹಾದ ಎಲೆಗಳು,ಮೆಹೆಂದಿಗಳನ್ನು ಕಲಸಿ ಕೂದಲಿಗೆ ಹಚ್ಚಿ, ಇನ್ನೂ ಆಕೆಯ ಸ್ನಾನಕ್ಕೋ ಹಾಲಿನ ಹೊಳೆಯೇ ಹರಿದಿದೆ.

     ಲೋಳೆಸರದ ಶಾಂಪೂವಿನಿಂದ ಕೂದಲನ್ನು ತೊಳೆದು,ಗುಲಾಬಿ ಸಾಬೂನಿನಿಂದ ಮೈತೊಳೆದು,ಬಿಸಿನೀರ ಶಾಖ,ಲೋಬಾನದ ಹೊಗೆಯನ್ನು ನೀಡಿ ಅವಳ ನೆಚ್ಚಿನ‌ ಹಸಿರು ರೇಷ್ಮೆ ಸೀರೆಯ ಉಟ್ಟು,ಬೆಂಡೋಲೆ,ನೆಕ್ಲೇಸು,ಮೂಗುತಿ,ಬಳೆ,ಸೊಂಟಕ್ಕೆ ಡಾಬು,ಕೈಗೆ ವಂಕಿಯನ್ನು ಧರಿಸಿ ಮದುಮಗಳಂತೆ ಕಂಗೊಳಿಸುತ್ತ,ನಿಂತಿಹಳು ಮಹಾರಾಣಿ ಭೂಮಿಕಾದೇವಿ.
      ಇಷ್ಟು ದಿನಗಳ‌ ವಿರಹವನ್ನು ತಾಳಲಾರದೇ ಕೋಗಿಲೆಯ ಬಳಿ ಆತನಿಗೆ ಕಳುಹಿಸಿದ ಸಂದೇಶ ಆತನಿಗೆ ತಲುಪಿತೇ ಎನ್ನುವ ಅನುಮಾನ.ಕೋಗಿಲೆಯ ಬಳಿ ಕೇಳಲು,ಕುಹೂ ಕುಹೂ ಎಂದು ಹುಂಕಾರ ಸೂಚಿಸಿದರೂ,ಆಕೆಗೆ ಸಮಾಧಾನವಿಲ್ಲ.ತನ್ನ ಕೆಲಸ ಕಾರ್ಯದ ನಡುವೆ ನನ್ನ ಸಂದೇಶ ಮರೆತನೇನೋ,ಅವನ ಸ್ವಾಗತಕ್ಕಾಗಿ ತಾನು‌ನಡೆಸಿದ ತಯಾರಿ ಕಡಿಮೆಯಾಯಿತೇ ಎನ್ನುವ ಅನುಮಾನ‌ ಬೇರೆ.
   ಅವನ ಸ್ವಾಗತಕ್ಕಾಗಿ ಪನ್ನೀರು ಸಿದ್ಧವಿದೆಯೇ ಎಂದು ಇನ್ನೊಮ್ಮೆ ಖಚಿತಪಡಿಸಿಕೊಂಡಳು.ಅವನಿಗಾಗಿ ಮಾಡಿಟ್ಟ ಅವನಿಷ್ಟದ ಖಾದ್ಯಗಳ ಬೆಂಡೆ ಹುಳಿ,ಬದನೆ ಎಣ್ಣೆಗಾಯಿ,ಮೆಣಸಿನಕಾಯಿ‌ ಬಜೆ,ಪಲ್ಯಗಳು,ಬೇಳೆಸಾರು,ಪ್ಯಾರಿಷ್ ಚಿತ್ರಾನ್ನ ,ಗೋಧಿ ಹುಗ್ಗಿ ಯಂತೂ ಆತನಿಗೆ ಪಂಚಪ್ರಾಣ,ಕೇಸರಿಬಾತು ಅಬ್ಬಾ ಎಷ್ಟು ಘಮಘಮ ಪರಿಮಳ ಸೋಕಿ ಅವನು ಏಳು ಸಮುದ್ರದ ದೂರದಲ್ಲಿದ್ದರೂ ಓಡಿ ಬರುವುದು ಖಚಿತ! ಮತ್ತೊಮ್ಮೆ ಬಿಸಿಯಾಗಿವೆಯೇ ಎಂದು ಖಚಿತ ಪಡಿಸಿಕೊಂಡಳು. ಅನ್ನವನ್ನಂತೂ ಬಿಸಿಯಾಗಿಯೇ ಬಡಿಸಬೇಕೆಂದು ಹಾಲಲ್ಲಿ ಬೇಯಿಸಲಿಟ್ಟಿದ್ದಳು.
   ಅಷ್ಟು ಪ್ರೀತಿಸುವವಳು ಅವನ‌ ಎಲ್ಲ ಸೀಕ್ರೆಟುಗಳನ್ನು ಬಲ್ಲವಳು,ಅವನ‌ ಗೆಳೆಯ ಚಾತಕನನ್ನೇ ಕರೆದಳು.ಚಾತಕನು ಕರೆದರೆ ಅವನು ಎಲ್ಲಿದ್ದರೂ ಓಡಿ ಬರುವನೆಂದು ಅರಿತವಳು. ಚಾತಕನು ಕರೆದನು. ವರುಣನು ಬಂದನು.ಪ್ರಿಯಕರನ ಭವ್ಯ ಸ್ವಾಗತವ ಕಣ್ಣು ತುಂಬಿಕೊಳ್ಳಲು ಜೀವ ರಾಶಿಗಳೆಲ್ಲ ನೆರೆದು ,ಪ್ರೀತಿಯ ವಾಲಗ ಊದಿ  ಅವರ ಏಕಾಂತಕ್ಕೆ ಭಂಗಬಂದಿತೆಂದು ತಮ್ಮ ತಮ್ಮ ಗೂಡನ್ನು ಸೇರಿದವು.



   (ಜುಲೈ ೧೪,೨೦೧೭ ರಂದು ಉದಯವಾಣಿಯ ಮಹಿಳಾ ಸಂಪದದಲ್ಲಿ ಪ್ರಕಟಿತ )