Monday, November 19, 2018


ಅಮ್ಮಂದಿರಿಗೊಂದು ದಿನವಿದೆ; ಅತ್ತೆಯಂದಿರಿಗೊಂದು ದಿನವಿರಲಿ !


ಅಮ್ಮಂದಿರ ದಿನ,ಅಪ್ಪಂದಿರ ದಿನ,ಅಣ್ಣ-ತಂಗಿಯರ ದಿನ,ಶಿಕ್ಷಕರ ದಿನ ಹೀಗೆ ದಿನಾಚರಣೆಗಳಿಗೆ ಸೇರ್ಪಡೆಯಾಗಬೇಕಾಗಿರುವುದು‌ ಅತ್ತೆಯಂದಿರ ದಿನಾಚರಣೆ.ನಿಘಂಟು ತೆಗೆದು ನೋಡಿದರೆ,ಅಪ್ಪನ ಸೋದರಿ ನಮಗೆ ಅತ್ತೆ,ಅಮ್ಮನ ಅತ್ತಿಗೆ ಸೋದರ ಅತ್ತೆ,ಗಂಡನ‌ ಅಮ್ಮಸೊಸೆಗೆ ಅತ್ತೆ, ಹೆಂಡತಿಯ ತಾಯಿ ಗಂಡನಿಗೆ ಅತ್ತೆ.ಆಂಗ್ಲರ ಆಂಟಿ ಬರುವ ಮೊದಲು ದೂರದ ಸಂಬಂಧಿಗಳನ್ನು ಅತ್ತೆಯೆಂದೇ ಸಂಭೋದಿಸುವ ರೂಢಿಯಿತ್ತು. ಚಿಕ್ಕಂದಿನಲ್ಲಿ ಇನ್ನೂ ಮದುವೆಯಾಗಲಿರುವ ಅತ್ತೆ ಮನೆಯಲ್ಲಿದ್ದರಂತೂ ಸದಾ ಅಡಿಗೆ-ಮನೆಗೆಲಸದಲ್ಲಿ ತೊಡಗಿರುವ ಅಮ್ಮನಿಗಿಂತ ಅತ್ತೆಯೇ ನಮಗೆ ತುಂಬ ಹತ್ತಿರ.ತುಂಟತನ ಮಾಡಿ ಅಮ್ಮನ ಬಳಿ‌ ಬೈಸಿಕೊಂಡು ಅತ್ತಾಗ ಸಮಾಧಾನ ಮಾಡಲು,ಚಾಕಲೇಟು ಬೇಕೆಂದು ಹಠ ಮಾಡಿದಾಗ ಅಮ್ಮನ ನಕಾರಗಳಿಂದ ತಪ್ಪಿಸಿ ಕೊಡಿಸಲು,ಎಣ್ಣೆ ಹಚ್ಷಿ ತಲೆಬಾಚಿಕೊಟ್ಟು, ಶಾಲೆಗೆ ತಡವಾಗಲು ತನ್ನ ಸ್ಕೂಟಿಯಲ್ಲಿ ಬಿಟ್ಟುಬರಲು ನಮಗೆ ಅತ್ತೆಯೇ ಬೇಕು.ಶಾಲೆಗಳಲ್ಲಿ ಕಷ್ಟವಾದ ಪಾಠಗಳನ್ನು ಮನೆಯಲ್ಲಿ ತಿಳಿಸಿ ಹೇಳುವುದರಲ್ಲೂ ಅತ್ತೆ ಎತ್ತಿದ ಕೈ.ಇನ್ನೂ ಅವಳ ಮದುವೆಯ ದಿನ‌ ಎಲ್ಲ ಮಕ್ಕಳೊಂದಿಗೆ ಆಟವಾಡಿ ,ಅವಳೊಂದಿಗೆ ನಾನು ಹೋಗುತ್ತೇನೆ ಎಂದು ಹಠಮಾಡಿದ್ದು ಇಂದಿಗೂ ನೆನಪಿದೆ.
  ಇನ್ನು ರಜಾ ದಿನಗಳಲ್ಲಿ ಅಮ್ಮನ ತವರಿಗೆ ಹೋಗಲು,ಬಗೆಬಗೆಯ ತಿಂಡಿತಿನಿಸು ಮಾಡಿಕೊಟ್ಟು,ಪೇಟೆಗೆ ಕೊಂಡೊಯ್ದು ಬಣ್ಣಬಣ್ಣದ ಬಟ್ಟೆ ಕೊಡಿಸಿ,ಐಸ್-ಕ್ರೀಮ್,ಮಿಠಾಯಿ ಕೊಡಿಸುವುದು ಖಚಿತ.ಮಾಮನ ಮಗ ತನ್ನ ಬ್ಯಾಟಿಂಗ್ ಮುಗಿಸಿ ತನಗೆ ನಿದ್ರೆ ಬರುತಿದೆಯೆಂದು ಓಡಲು ಅತ್ತೆ ತನ್ನ ಮಧ್ಯಾಹ್ನದ ನಿದ್ರೆಗೆ ಪೂರ್ಣ ವಿರಾಮವನ್ನಿತ್ತು,ನನ್ನೊಂದಿಗೆ ಆಡುತ್ತಿದ್ದಳು.ದೇವಸ್ಥಾನಗಳಿಗೆ,ವಿಶೇಷ ಕಾರ್ಯಕ್ರಮಗಳಿಗೆ ಹೋಗುವಾಗ ನನ್ನನ್ನು ಸಿದ್ದಗೊಳಿಸುವ ಜವಾಬ್ದಾರಿ ಅವಳೇ ವಹಿಸಿಕೊಳ್ಳುತ್ತಿದ್ದಳು.ನನಗೆ ಮಲ್ಲಿಗೆ ಹೂವು ಇಷ್ಟವೆಂದು ಮಾಮನ‌ ಬಳಿ ಜಾಸ್ತಿ ಹೂವನ್ನು ತರಲು ಹೇಳುತ್ತಿದ್ದಳು.ಈಗಿನ ಕಾಲೇಜು, ಕಛೇರಿ ಕೆಲಸದ ನಡುವೆ ಎಲ್ಲಿಯ  ಬೇಸಿಗೆರಜೆ.ರಜೆಯ
 ಇಲ್ಲ,ಅತ್ತೆ ಮನೆಯ ಭೇಟಿಯೂ ಇಲ್ಲ.
 ಮದುವೆಯ ನಂತರ ಸಿಕ್ಕ ಇನ್ನೋರ್ವ ಅಮ್ಮ ಅತ್ತೆ.ಮುಂಜಾನೆ ಎದ್ದು ಅಡಿಗೆ ಮಾಡಿ ಕಛೇರಿಗೆ ಹೋಗುವಾಗ ಡಬ್ಬಿಯ ನೀಡಿ,ವಾರಕ್ಕೊಮ್ಮೆ ಸಿನಿಮಾ,ಸುತ್ತಾಟವೆಂದು ನಮ್ಮನ್ನು ಕಳುಹಿಸಿ,ತನ್ನ ಪ್ರೀತಿ ಆದರಗಳಿಂದ ತವರಿನ‌ ನೆನಪು ಕಾಡದಂತೆ ಮಾಡುವ ಮಹಾನ್ ಶಕ್ತಿ ಅವಳು.ನಾನು ಕಾರು ಓಡಿಸಲು ಕಲಿಯಲು ಅವಳೇ ಕಲಿತಷ್ಟು ಉತ್ಸಾಹ.ಪಾರ್ಲರು,ಜಿಮ್ಮುಗಳಿಗೆ ಹೋಗಿಬಾಮ್ಮ ಎಂದು ಕಳುಹಿಸಿ,ದೀಪಾವಳಿ ಹಬ್ಬದ ದಿನಗಳಲ್ಲಿ ಮಗನೊಂದಿಗೆ ನನಗೂ ಎಣ್ಣೆ- ಸ್ನಾನ.ಇನ್ನು ಮನೆಗೆ ಮಗು ಬರುವ ಸಿಹಿ ಸುದ್ದಿ ಕೇಳಿ ಒಂದು ದಿನವೂ ತಪ್ಪಿಸದೇ ಎಳನೀರು ತಂದುನೀಡಿ,ಬಾದಾಮಿ,ಕೇಸರಿಯನ್ನೆಲ್ಲ ಹಾಲಲ್ಲಿ ನೆನೆಸಿಕೊಡುತ್ತಿದ್ದಳು.ಮಗ ಹುಟ್ಟಿದ ಕ್ಷಣದಿಂದ ಹಾಲುಣಿಸಲಷ್ಟೇ ಅವನು ನನ್ನ  ಬಳಿ ಬರುತ್ತಿದ್ದುದು,ಉಳಿದ ಸಮಯವೆಲ್ಲ ತನ್ನಜ್ಜಿಯ ಮಡಿಲಲ್ಲೇ.ಆರು ತಿಂಗಳ ಹೆರಿಗೆ ರಜೆ ಮುಗಿಸಿ,ಕೆಲಸಕ್ಕೆ ಸೇರಲು ಅವಳ ಸಹಕಾರದಿಂದಲೇ ಸಾಧ್ಯವಾಯಿತು.
  ಕೆಲವು ಮನೆಗಳಲ್ಲಿ ಮಗುವಿಗೆ ಅತ್ತೆಯೇ ನಾಮಕರಣ ಮಾಡುವ,ತೊಟ್ಟಿಲು ಶಾಸ್ತ್ರ ಮಾಡುವ ಸಂಪ್ರದಾಯವಿದೆ.ಇನ್ನು ಕೆಲವು ಕಡೆ ಮದುವೆಯ ಶುಭ ಸಂದರ್ಭದಲ್ಲಿ ಮದುಮಗಳನ್ನು ಮಂಟಪಕ್ಕೆ ಕರೆತರುವ ಜವಾಬ್ದಾರಿಯು ಸೋದರ ಮಾವ-ಅತ್ತೆಯದೇ.'ಅತ್ತಿ ಅತ್ತಿ ನಮ್ಮತ್ತಿ ನನ್ನ ದಡ್ಡ ಅಂತಾರೆ' ಎಂಬ  ಜನಪದ ಹಾಡಿಗೆ ನನ್ನ ತಮ್ಮ ಮತ್ತು ಅವನ ಗೆಳತಿ ಶಾಲೆಯ ವಾರ್ಷಿಕೋತ್ಸವಕ್ಕೆ ನೃತ್ಯ ಮಾಡಿ,ಮೊನ್ನೆ ಮೊನ್ನೆ ಅವನ ಗೆಳೆಯರೆಲ್ಲ ಅವಳನ್ನು ಅತ್ತೆಯೆಂದು ಕಾಡಿಸುತ್ತಿದ್ದರು.ಆ ಹಾಡಿನಲ್ಲಿ ಅಳಿಯನಾದವನು ಬಹು ದಡ್ಡನಾಗಿದ್ದು ಅತ್ತೆ ಕೇಳಿದಕ್ಕೆಲ್ಲ ಹುಚ್ಚು ಹುಚ್ಚಾಗಿ ಉತ್ತರ ನೀಡಿ ತನ್ನ ದಡ್ಡತನ ತೋರಿಸುತ್ತಾನೆ.ಈಗ  ಅವಳನ್ನು ಹಾಗೇ ಕಾಡಿದರೆ ಈ ಸದ್ಯ ಮದುವೆಯಾಗಿರುವ ಅವಳ ಗಂಡ ನಮ್ಮನ್ನು ಓಡಿಸಿಕೊಂಡು ಬಂದಾನು.
 'ಮದುವೆಗೂ ಮೊದಲು ಹುಡುಗ- ಹುಡುಗಿಯ ಜಾತಕ ಕೂಡಿಸುವುದರೊಂದಿಗೆ,ಅತ್ತೆ- ಸೊಸೆಯ ಜಾತಕವೂ ಕೂಡಬೇಕು' ಎಂದು ಈ ಸದ್ಯ ಪತ್ರಿಕೆಯಲ್ಲಿ ಓದಿದ ನೆನಪು.ಆ ಮಾತು ಎಷ್ಟು ಸತ್ಯ.ಬರೀ ಗಂಡ-ಹೆಂಡತಿ ಅನ್ಯೋನ್ಯವಾಗಿದ್ದರೆ ಸಾಲದೂ ಅತ್ತೆ-ಸೊಸೆಯ ನಡುವೆಯೂ ಅನ್ಯೋನ್ಯತೆಯಿದ್ದರೆ ಆ ಕುಟುಂಬದಷ್ಟು ಸುಖಿ ಕುಟುಂಬ ಇನ್ನಿಲ್ಲ.ಈ ಸದ್ಯ ಬಿಡುಗಡೆಯಾದ 'ಬಾಹುಬಲಿ'ಯನ್ನೇ ತೆಗೆದುಕೊಂಡರೆ ಹೆಂಡತಿ ಪ್ರೀತಿಗಾಗಿ ಅಮ್ಮನ ಪ್ರೀತಿಯನ್ನು ಕಳೆದುಕೊಳ್ಳಬೇಕಾಗುತ್ತದೆ.'ಅತ್ತೆ-ಸೊಸೆ ಜಗಳದಲ್ಲಿ ಮಗ ಬಡವಾದನು' ಎಂಬಂತಾಗುತ್ತದೆ.ಇನ್ನು ಕೆಲವರ ಬಾಯಲ್ಲಿ 'ಮುತ್ತು ಕೊಡುವಳು ಬಂದ ಮೇಲೆ ತುತ್ತು ಕೊಡುವವಳು ಬೇಡವಾದಳು' ಎಂಬ ಮೂದಲಿಕೆ ಬೇರೆ.ಅನ್ಯೋನ್ಯತೆಯೆಂದರೆ ಸ್ವಲ್ಪವೂ ಮನಸ್ತಾಪ,ಜಗಳವಿರಬಾರದೆಂದೆನಿಲ್ಲ,ಈ ಹಿಂದೆ ಹಿರಿಯರ ಬಾಯಲ್ಲಿ ಕೇಳಿದಂತೆ,' ಸಾವಿರ ಜನಿವಾರ ಗಂಟು ಹಾಕಬಹುದು,ಎರಡು ಜಡೆ ಗಂಟು ಹಾಕಲು ಸಾಧ್ಯವಿಲ್ಲ', ಮಾತುಕತೆ,ಮನಸ್ತಾಪಗಳು ಇದ್ದದ್ದೇ.' ಗಂಡ ಹೆಂಡರ ಜಗಳ ಉಂಡು ಮಲಗುವ ತನಕ ಅನ್ನುವಂತೆ,ಅತ್ತೆ-ಸೊಸೆಯ ಜಗಳ ಮಗನು ಬರುವ ತನಕವೆಂದಿದ್ದರೆ,ಎಲ್ಲ ಮರೆತು ಸುಧಾರಿಸಿಕೊಂಡಿದ್ದರೆ ಆದರ್ಶ ಅತ್ತೆ-ಸೊಸೆಯಾಗುವುದರಲ್ಲಿ ಸಂಶಯವಿಲ್ಲ.
 ಅತ್ತೆ-ಸೊಸೆಯ ಮಧುರ ಬಾಂಧವ್ಯವನ್ನು ಕಥೆಯಾಗಿಸಿ ಹತ್ತಾರು ಧಾರಾವಾಹಿಗಳು ದೂರದರ್ಶನದಲ್ಲಿ ಮೂಡಿಬಂದಿದ್ದು,ಹಿಂದಿಯ ' ಕ್ಯೂಂಕಿ ಸಾಸ್ ಭೀ ಕಭೀ ಬಹು ಥೀ' ಎರಡು ಸಾವಿರದಷ್ಟು ಎಪಿಸೋಡ್ ಓಡಿದ್ದು ವಿಶೇಷ.ಅತ್ತೆ- ಸೊಸೆಯ ಬಾಂಧವ್ಯವೇ ಅಂತದ್ದು.ಆ ಧಾರವಾಹಿಯ ಅಂಕಿತದಂತೆ ಅತ್ತೆಯು ತಾನು ಒಂದು ಕಾಲದಲ್ಲಿ ಸೊಸೆಯಾಗಿದ್ದೆ ಎಂದು ನೆನಪಿಟ್ಟುಕೊಂಡು,ಸೊಸೆಯು ತನ್ನ ಅತ್ತೆಯು ಹಿಂದೆ ಸೊಸೆಯಾಗಿ ಪಡೆದ ಅನುಭವದಿಂದ ನನಗೆ ಹಿತವಚನಗಳನ್ನು ಹೇಳುತ್ತಾರೆ ಎಂದೆಣಿಸಿ ಗೌರವ ನೀಡಿದರೆ ಅಂತಹ ಬಾಂಧವ್ಯ ಇನ್ನೊಂದಿಲ್ಲ.




   ಇಂದು ಕಛೇರಿಯಲ್ಲೊಬ್ಬಳು " ನಮ್ಮತ್ತೆ ಒಂದು ದಿನವೂ ನಮಗೆ ತಂಗಳು ತಿನ್ನಲು ನೀಡಿಲ್ಲ,ಪಾಪ ಅವರೇ ತಿನ್ನುತ್ತಾರೆ." ಎಂದಳು.ಎರಡು ಮಕ್ಕಳನ್ನು ಪಡೆದಿರುವ ಅವಳ ಇಬ್ಬರೂ ಮಕ್ಕಳನ್ನು ಸ್ಕೂಲಿಗೆ ಕಳುಹಿಸುವ,ಅವರಿಗಾಗಿ ಊಟ ತಿಂಡಿ,ಹೋಮ್ ವರ್ಕ್ ಮಾಡಿಸುವ ಎಲ್ಲಾ ಜವಾಬ್ದಾರಿಯನ್ನು ಅತ್ತೆಯೇ ಪಡೆದಿದ್ದರೆ,ಇವಳು ಅತ್ತೆಗೆ ಆದಷ್ಟು ಮನೆಕೆಲಸದಲ್ಲಿ ಸಹಾಯ ಮಾಡಿ ಕಛೇರಿಗೆ ಬರುತ್ತಾಳೆ.
  ಮಗನನ್ನು ಕಳೆದುಕೊಂಡ ಕೆಲವು ತಾಯಂದಿರು ತಮ್ಮ ಸೊಸೆಯನ್ನು ಸ್ವಂತ ಮಗಳಂತೆಣಿಸಿ,ಅವಳನ್ನು ಒಪ್ಪಿಸಿ ಇನ್ನೊಂದು ಮದುವೆ ಮಾಡಿಸಿದ ಉದಾಹರಣೆಗಳಿವೆ.ಮಗ ಕೆಟ್ಟವನೆಂದು ತಿಳಿದು ಸೊಸೆಯನ್ನು ರಕ್ಷಿಸಿ ಅವಳಿಗೊಂದು ಬಾಳು ಒದಗಿಸುವ ಸ್ಥೈರ್ಯ ಹೊಂದಿರುವ ತಾಯಂದಿರು ಈ ಜಗದಲ್ಲಿದ್ದಾರೆ.ಗಂಡ-ಹೆಂಡತಿಯ ವಿಚ್ಛೇದನವಾಗಿದ್ದರೂ ಅತ್ತೆ-ಸೊಸೆಯ ಸಂಬಂಧ ತಾಯಿ-ಮಗಳಂತಿರುವ ಉದಾಹರಣೆಯೂ ಇದೆಯೆನ್ನೋಣ.
   ಮಗಳನ್ನು ಹೆತ್ತವಳು ಅಳಿಯನಿಗೆ ಧಾರೆಯೆರದು,ಅತ್ತು ಅತ್ತೆಯಾಗುತ್ತಾಳೆ.ಮಗನನ್ನು ಹೆತ್ತರೆ ಸಾಲದು,ಮಗನಿಗೆ ಉತ್ತಮ ತಾಯಿಯೂ ಆಗಬೇಕು,ಸೊಸೆಯನ್ನು ಪಡೆದು ಮಗದೊಮ್ಮೆ ಅತ್ತೆಯ ರೂಪಿನ ಅಮ್ಮನಾಗಬೇಕು.ಆಗಲೇ ಅವಳ ಜನ್ಮ ಸಾರ್ಥಕವಾಗುವುದು.
 ಈ ಸದ್ಯ  ಚಲನಚಿತ್ರ ಹಿರಿಯ ನಟಿಯೋರ್ವಳು,"ನನ್ನ ಸೊಸೆ ನನಗೆ ಸಿಕ್ಕ‌ ಇನ್ನೋರ್ವ ಮಗಳು,ನಮಗಾಗಿ ತನ್ನ ಹೆತ್ತವರನ್ನು ಬಿಟ್ಟು ಬಂದಿದ್ದಾಳೆ,ನನ್ನ ಮಗನ‌ ಮೇಲೆ ಅವಳಿಗೆ ಜಾಸ್ತಿ ಅಧಿಕಾರವಿರುವುದು" ಎಂಬ ಸಂದೇಶ ಜಾಲತಾಣಗಳಲ್ಲಿ ನೀಡಿದ್ದರು.ಮದುವೆಯವರೆಗೂ ಒಂದು ಮನೆಯ ಮಗಳಾಗಿದ್ದವಳು,ಮದುವೆಯ ನಂತರ ಇನ್ನೊಂದು ಮನೆಮಗಳು ಅವಳು.ಇವರೆಗೂ ತವರಿನ ಆಚಾರ,ಊಟೋಪಚಾರವೇ ಬೇರೆ,ಗಂಡನ ಮನೆಯ ಆಚಾರವೇ ಬೇರೆ,ಎಲ್ಲ ಅರಿತುಕೊಂಡು ಬದಲಾಗಲು ಸೊಸೆಗೆ ಸಾಕಷ್ಟು ಸಮಯವೇ ಬೇಕು.ಆ ಅವಕಾಶ ನೀಡಿ ಸೊಸೆ ತನ್ನ ಮಗನನ್ನು ನನ್ನಿಂದ ಕಿತ್ತುಕೊಳ್ಳಲು ಮನೆಗೆ ಬಂದ ಮಾರಿ ಎಂದುಕೊಳ್ಳದೇ,ಸೊಸೆಯನ್ನು ತನ್ನ ಮಗಳಾಗಿ ನೋಡಿಕೊಂಡರೆ ಅತ್ತೆಗೆ ಅಮ್ಮನಾಗುವ ಅವಕಾಶ.ಆ ಶಕ್ತಿ ಅವಳಲ್ಲಿದೆ.
ಈ ಸದ್ಯ ನಾನೂ ಅತ್ತೆಯಾಗಿದ್ದೇನೆ.ನಾದಿನಿಗೆ ಮಗ ಹುಟ್ಟಿದ್ದಾನೆ.ನಾನು ಉತ್ತಮ ಅತ್ತೆಯಾಗಬೇಕಿದೆ.

                                 (ಉದಯವಾಣಿಯ ಮಹಿಳಾ ಸಂಪದದಲ್ಲಿ ಪ್ರಕಟಿತ )

https://www.udayavani.com/kannada/news/womens-supplement/229232/there-is-a-day-for-moms-be-it-a-day

No comments: