Thursday, September 5, 2019





                                      ಒಂದೇ ಒಂದು ಕಾಲ್‌ ಮಾಡು ಪ್ಲೀಸ್‌…

ಪ್ರಿಯ ಇವನೇ,
ನನಗಂತೂ ಇತ್ತೀಚಿಗೆ ಮೊಬೈಲ್‌ ಗೀಳು. ಅವರಿವರ ಮೇಸೇಜು, ಪ್ರೊಫೈಲ್‌ ತಡಕಾಡುವುದು,ಅಪಡೇಟ್‌ ನೋಡುವ ಕೆಲಸವಲ್ಲ. ನೀನೇನಾದರೂ ಫೇಸ್‌ಬುಕ್ಕಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸುತ್ತೀಯಾ? ವಾಟ್ಸಾಪ್‌ನಲ್ಲಿ ನಿನ್ನಿಂದ ಒಂದು ಸಣ್ಣ ಮೇಸೇಜು ಬರಬಹುದೇ?ಅನ್ನೋ ಆಸೆ. ಅಪರಿಚಿತ ನಂಬರ್‌ನಿಂದ ಬಂದ ಕರೆಗಳನ್ನು ನಿರಾಕರಿಸುತ್ತಿದ್ದ ನನಗಂತೂ ಈಗ ಅಂತಹ ಕರೆ ಬಂದರಂತೂ, ನಿನ್ನದೇ ಕರೆ ಇರಬಹುದು ಅನ್ನೋ ಸಣ್ಣದಲ್ಲ, ದೊಡ್ಡದೇ ಆಸೆ. ಆದರೆ, ಅತಿ ಆಸೆ ಗತಿ ಕೇಡು ಎಂಬಂತೆ ಅವು ರಾಂಗ್‌ ನಂಬರಗಳೇ ಆಗಿರುತ್ತವೆ.

ಗೆಳೆಯ, ನನಗಂತೂ ಹುಣ್ಣಿಮೆಯ ದಿನವೂ ಆಕಾಶವೆಲ್ಲ ಖಾಲಿ ಖಾಲಿ ಅನ್ನಿಸುತ್ತಿದೆ.ನೀನು ಬರೆದ ಅಕ್ಷರಗಳನ್ನೇ ಮನಸು ಹಂಬಲಿಸುತ್ತಿದೆ. ಹಿಂದೆ ಬರೆದ ಪತ್ರಗಳ ಓದುತ್ತ ಕಣ್ಣು ತಂಪು ಮಾಡಿಕೊಳ್ಳುತ್ತೇನೆ. ಆದರೂ, ಅವೆಲ್ಲ ಕ್ಷಣಿಕ. ರಾಧೆ ಕೃಷ್ಣನಿಗಾಗಿ ತಪಿಸಿದಷ್ಟೋ ಅಥವಾ ಅದಕ್ಕಿಂತ ಮಿಗಿಲೋ ನಾನರಿಯೆ. ಪ್ರೀತಿಗೆ ಹೋಲಿಕೆಯುಂಟೆ? ಒಟ್ಟಿನಲ್ಲಿ, ನಿನಗಾಗಿ ಕಾಯುವುದೇ ಈ ಕ್ಷಣದ ಕೆಲಸ. ನಿನ್ನ ಪತ್ರ ಕಾಣದೇ ಇಂದಿಗೆ ಒಂದು ತಿಂಗಳು. ಅಂದರೆ, ನಾಲ್ಕು ವಾರಗಳು ಅಂದರೆ ಗಂಟೆ,ನಿಮಿಷ,ಸೆಕೆಂಡುಗಳ ಎಣಿಸುವುದೇ ಇಂದು ನನ್ನ ಕಾಯಕ.ಪ್ರತಿ ಸೆಕೆಂಡು,ನಿಮಿಷಗಳು ಯುಗಯುಗಗಳಂತೆ ಭಾಸವಾಗುತ್ತಿವೆ.

ಅಮ್ಮ ನನಗಿಷ್ಟವೆಂದು ಮಾಡಿದ ತಾಳೆಪೆಟ್ಟನ್ನು ಒಂದೆರಡು ಜಾಸ್ತಿಯೇ ಹಾಕಿಸಿಕೊಂಡು ತಿನ್ನುವವಳು, ಇಂದು ಹಸಿವಿಲ್ಲಮ್ಮ ಎಂದ ಬಿಟ್ಟ. ಅಷ್ಟಕ್ಕೇ ಬೆಚ್ಚಿದ ಅಮ್ಮ, ಏನಾಯಿತೋ ಹುಶಾರಿಲ್ಲವಾ ಎಂದೆಲ್ಲ ಕೇಳುವಾಗ ಅವಳಿಗೆ ಏನು ಉತ್ತರಿಸಲಿ.ಗೆಳತಿ ಓದಲು ಬಾರೆ ಎಂದು ಕರೆಯುವಾಗ ಮನಸಿಲ್ಲ ಎಂದರೆ ಅವಳೂ ಏನಾಯಿತೋ ಎಂದು ಕೇಳುವಾಗ ಏನು ಹೇಳಲಿ ಗೆಳೆಯ?

ಗೆಳತಿಯರೆಲ್ಲ ಮೊಬೈಲ್ಸ್‌ ಧ್ಯಾನದಲ್ಲಿದ್ದರೆ ಅವರಿಗೆಲ್ಲ ಗದರಿಸುತ್ತ ಅವರ ಮುಂದೆ ತುಷಾರ,ತರಂಗದಂಥ ಪತ್ರಿಕೆಯನ್ನೋ,ಕಥೆ ಕಾದಂಬರಿ ಓದಿ, ಅದರ ಸ್ವಾದವ ಹೇಳುತ್ತಿ¨ªೆ.ಅವರು ನಾಳೆ ನೀಲಿ ಚೂಡಿದಾರ ಹಾಕಿ ಬಾರೆ ಎಂದು ಮಾಡಿದ ವಾಟ್ಸಪ್‌ ಕಾಣದೇ ಬೇರೆ ಬಟ್ಟೆ ತೊಟ್ಟಾಗ ವಾಟ್ಸಪ್‌ ಚೆಕ್‌ ಮಾಡಿಲ್ಲ ಕಣೆ ಎನ್ನುತ್ತಿದ್ದೆ.ಈಗ ಅದೆಲ್ಲ ಸುಳ್ಳೇನೋ ಎಂಬಂತೆ ಮೊಬೈಲ್‌ ಕಡೆಗೇ ನನ್ನ ದೃಷ್ಟಿ. ಪ್ರೀತಿಯಿಂದ ಒಂದು ಕರೆ ಮಾಡಿ ನೀನು ಸೌಖ್ಯವೇ ತಿಳಿಸು.ಅಷ್ಟು ಸಾಕು ಈ ಜೀವಕ್ಕೆ…
ಇಂತಿ ನಿನ್ನ ಪ್ರೀತಿಯ,
ಉಲೂಚಿ
                                 (ಉದಯವಾಣಿಯ josh ಲ್ಲಿ ಪ್ರಕಟಿತ )

No comments: