Tuesday, July 30, 2019

            ಸೆಲ್ಫಿ ವಿತ್‌ ಹಲಸಿನ ಹಣ್ಣು



ವೆಂಕಟಾಪುರದಲ್ಲಿ ಸುಮಿತನೆಂಬ ಜಾಣ ಹುಡುಗನೊಬ್ಬನಿದ್ದ. ಕಲಿಕೆಯಲ್ಲಿ, ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದ. ಗುರುಗಳು ನೀಡಿದ ಕಷ್ಟಕರ ಸಮಸ್ಯೆಯನ್ನು ಬಿಡಿಸುವುದೆಂದರೆ ಬಲು ಇಷ್ಟ ಆವನಿಗೆ. ಒಮ್ಮೆ, ಶಾಲೆಯಿಂದ ಮನೆಗೆ ಹೋಗುವ ದಾರಿಯಲ್ಲಿ ಹಲಸಿನ ಹಣ್ಣಿನ ಗಾಡಿ ಅವನ ಕಣ್ಣಿಗೆ ಬಿತ್ತು. ಹಲಸಿನ ಹಣ್ಣನ್ನು ಕಂಡು ಅವನ ಬಾಯಲ್ಲಿ ನೀರೂರಿತು. ಆದರೆ ಆ ದಿನ ಅವನು ಹಣ ತಂದಿರಲಿಲ್ಲ. ಅವನ ಬ್ಯಾಗಿನಲ್ಲಿ ಮೊಬೈಲ್‌ ಇರುವುದು ನೆನಪಾಯಿತು. ಹಣ್ಣಿನ ಗಾಡಿ ಜೊತೆ ಒಂದು ಸೆಲ್ಫಿ ತೆಗೆಯೋಣವೆಂದು ಮೊಬೈಲನ್ನು ಹೊರತೆಗೆದನು. ಹಣ್ಣಿನ ಅಂಗಡಿಯ ಬಳಿ ನಿಂತು ಹಣ್ಣಿನೊಂದಿಗೆ ಸೆಲ್ಫಿಯನ್ನು ತೆಗೆದನು. ಆ ಫೋಟೋವನ್ನು ಅಮ್ಮನಿಗೆ ತೋರಿಸಿ ಖುಷಿ ಪಡುವ ಆಸೆ ಅವನದು.
ಇದನ್ನು ಕಂಡವನೇ ಅಂಗಡಿಯವನು “ಹಣ್ಣು ಬೇಕೆ?’ ಎಂದು ಕೇಳಿದನು. ಸುಮಿತನಿಗೆ ಆಸೆಯಿಂದ “ಹೌದು’ ಎನ್ನಬೇಕು ಅಂದುಕೊಂಡರೂ, ಕಾಸಿಲ್ಲದಿರುವುದು ನೆನಪಾಗಿ, “ಬೇಡ. ನಾಳೆ ಹಣ ತಂದು ಕೊಳ್ಳುತ್ತೇನೆ’ ಎಂದನು. ಇದನ್ನು ಕೇಳಿ ಅಂಗಡಿಯವನು ದಿನಾಲೂ ಹೀಗೆ ವ್ಯಾಪಾರಕ್ಕೆ ನಿಂತರೂ ಒಂದು ಪುಡಿಗಾಸು ವ್ಯಾಪಾರವೂ ಆಗುತ್ತಿಲ್ಲ ಪುಟ್ಟ, ನೀನಾದರೂ ಆಸೆ ಪಟ್ಟಿದ್ದೀಯಾ… ತಗೋ ಹಣ್ಣು ತಿನ್ನು. ನಾಳೆ ಹಣ ಕೊಡುವಿಯಂತೆ’ ಎಂದು ಎಷ್ಟು ನಿರಾಕರಿಸಿದರೂ ಒತ್ತಾಯ ಮಾಡಿ ನೀಡಿದನು.
ಸುಮಿತನಿಗೆ ಉಪಾಯವೊಂದು ಹೊಳೆಯಿತು. ಹಣ್ಣಿನೊಂದಿಗೆ ತೆಗೆದ ಸೆಲ್ಫಿಯನ್ನು ತನ್ನ ವಾಟ್ಸಾಪ್‌, ಫೇಸ್‌ಬುಕ್‌ನ ಸ್ಟೇಟಸ್‌ನಲ್ಲಿ ಹಾಕಿ “ಸೂಪರ್‌ ಹಣ್ಣು. ಕಡಿಮೆ ಬೆಲೆ, ರುಚಿ ಹೆಚ್ಚು’ ಎಂದು ವ್ಯಾಪಾರಿಯನ್ನು ಹೊಗಳಿ ಬರೆದು ಪೋಸ್ಟ್‌ ಮಾಡಿದನು. ಇದನ್ನು ಕಂಡ ಅವನ ಸ್ನೇಹಿತರು ತಾವು ಕೂಡಾ ಹಣ್ಣಿನ ಗಾಡಿಗೆ ಭೇಟಿ ಕೊಟ್ಟರು. ಅವರೂ ಸುಮಿತನಂತೆಯೇ ಸೆಲ್ಫಿಯನ್ನು ತೆಗೆದುಕೊಂಡು ಇಂಟರ್‌ನೆಟ್‌ನಲ್ಲಿ ಶೇರ್‌ ಮಾಡಿದರು. ಇದರಿಂದ ದಿನೇ ದಿನೇ ವ್ಯಾಪಾರಿಯ ವ್ಯಾಪಾರವು ಚೆನ್ನಾಗಿ ಕುದುರ ತೊಡಗಿತು. ಅಂದಿನಿಂದ ಅವನ ಅಂಗಡಿಗೆ “ಸೆಲ್ಫಿ ಪ್ರೊಟ್‌ ಶಾಪ್‌’ ಎಂಬ ಹೆಸರು ಬಂದಿತು.

ಕೆಲ ದಿನಗಳ ನಂತರ ಸುಮಿತ್‌ ಹಲಸಿನ ಹಣ್ಣಿನ ಗಾಡಿಯ ಮುಂದೆ ನಡೆದುಹೋಗುವಾಗ ವ್ಯಾಪಾರಿ ಅವನನ್ನು ಕರೆದನು. ಒಂದು ಬುಟ್ಟಿ ತುಂಬಾ ಹಲಸಿನ ತೊಳೆಗಳನ್ನು ಕೊಟ್ಟು “ನಿನ್ನಿಂದ ನನ್ನ ವ್ಯಾಪಾರ ಕುದುರಿತು. ನಿನಗೆ ಧನ್ಯವಾದಗಳು’ ಎಂದನು. ಸುಮಿತನಿಗೆ ತುಂಬಾ ಖುಷಿಯಾಯಿತು.
     (ಉದಯವಾಣಿಯ ಚಿನ್ನಾರಿಯಲ್ಲಿ  ಪ್ರಕಟಿತ )

No comments: