Tuesday, July 30, 2019

            ಸ್ಕೂಟರ್‌ಗೆ ಜಂಭ

ಮಹೇಶ ತರಕಾರಿ ವ್ಯಾಪಾರ ನಡೆಸುತ್ತಿದ್ದನು. ಅವನ ಬಳಿ ಸೈಕಲ್‌ ಇತ್ತು. ವ್ಯಾಪಾರ ಚೆನ್ನಾಗಿ ಕುದುರುತ್ತಲೇ ಒಂದು ಸ್ಕೂಟರನ್ನು ಕೊಂಡು ಅದರಲ್ಲಿ ತರಕಾರಿ ಮಾರಲು ಶುರುಮಾಡಿದನು. ಸೈಕಲನ್ನು ಅಂಗಡಿಯ ಸಹಾಯಕ ರಾಮುವಿಗೆ ದಾನವಾಗಿ ಕೊಟ್ಟನು.
ಒಮ್ಮೆ ಮಹೇಶ ಮತ್ತು ರಾಮು ಅಂಗಡಿಯಲ್ಲಿ ಕೆಲಸದಲ್ಲಿ ನಿರತರಾಗಿದ್ದರು. ಸ್ಕೂಟರ್‌ ಮತ್ತು ಸೈಕಲ್ಲು ಅಕ್ಕಪಕ್ಕವೇ ನಿಂತಿತ್ತು. ಸ್ಕೂಟರ್‌ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳಲು ಶುರುಮಾಡಿತು. “ನೋಡು, ಎಲ್ಲರಿಗೂ ನಾನೆಂದರೆ ಅಚ್ಚುಮೆಚ್ಚು. ಸ್ಕೂಲಿಗೆ ಮಕ್ಕಳನ್ನು ಬಿಡಲು, ತರಕಾರಿ ತರಲು ಬಳಸುತ್ತಾರೆ. ನಾನು ಮನೆಯಲ್ಲಿದ್ದರೆ ಪ್ರತಿಷ್ಠೆ , ನಾನಿಲ್ಲದೇ ಲೋಕವೇ ನಡೆಯುವುದಿಲ್ಲ’ ಎಂದೆಲ್ಲ ಹೇಳಿಕೊಳ್ಳತೊಡಗಿತು. ಸೈಕಲ್ಲು ಬೇಜಾರಾದರೂ ತೋರ್ಪಡಿಸದೇ ಸುಮ್ಮನೆ ನಿಂತಿತ್ತು.
ಸ್ವಲ್ಪ ದಿನ ಕಳೆದಂತೆ ರಾತ್ರಿ ಅಂಗಡಿ ಮುಚ್ಚಿ ಮಹೇಶ ಮತ್ತು ರಾಮು ಅವರವರ ಮನೆಗೆ ತೆರಳಲು ಅಣಿಯಾದರು. ರಾಮು ಮನೆಗೆ ಸ್ವಲ್ಪ ಸಾಮಾನು ಕೊಳ್ಳುವುದಿದೆ ಎಂದು ಪಕ್ಕದ ಬೀದಿಗೆ ಹೋದನು. ಮಹೇಶ ಸ್ಕೂಟರಿನಲ್ಲಿ ಹೋಗುವಾಗ ದಾರಿಯಲ್ಲಿ ಮಧ್ಯ ಸ್ಕೂಟರ್‌ ಕೆಟ್ಟು ನಿಂತಿತು. ಅಷ್ಟರಲ್ಲಿ ರಾಮು ಸೈಕಲ್‌ನಲ್ಲಿ ಬಂದನು. ಮಹೇಶ ಸ್ಕೂಟರನ್ನು ಅಲ್ಲಿಯೇ ಬಿಟ್ಟು ರಾಮು ಜೊತೆ ಸೈಕಲ್‌ನಲ್ಲಿ ಮನೆಗೆ ಹೋದನು. ಆ ರಾತ್ರಿ ಚಳಿಯಲ್ಲಿ ಸ್ಕೂಟರ್‌ ನಡುಗಿತು. ಮರುದಿನ ರಿಪೇರಿಯವನು ಸ್ಕೂಟರ್‌ ಸರಿಯಾಗಲು ಒಂದು ವಾರ ತಗುಲುತ್ತದೆ ಎಂದು ಹೇಳಿದ. ಅಷ್ಟು ಕಾಲ ಮಹೇಶ ಸೈಕಲ್‌ನಲ್ಲೇ ಪ್ರಯಾಣಿಸಿದ. ತಾನಿಲ್ಲದೆ ಲೋಕವೇ ನಡೆಯುವುದಿಲ್ಲ ಎಂದು ಬಡಾಯಿ ಕೊಚ್ಚಿಕೊಂಡಿದ್ದು ಸ್ಕೂಟರ್‌ಗೆ ನೆನಪಾಗಿ ಪೆಚ್ಚಾಯಿತು.
                                  (ಉದಯವಾಣಿಯ ಚಿನ್ನಾರಿಯಲ್ಲಿ  ಪ್ರಕಟಿತ )

No comments: